ನೂತನ ಆದಾಯ ತೆರಿಗೆ ಮಸೂದೆ | ಐಟಿ ಅಧಿಕಾರಿಗಳಿಗೆ ಇಮೇಲ್, ಸಾಮಾಜಿಕ ಮಾಧ್ಯಮ ಖಾತೆಗಳ ಪರಿಶೀಲನೆಗೆ ಅಧಿಕಾರ!

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಹೊಸ ಆದಾಯ ತೆರಿಗೆ ಮಸೂದೆ ಮೂಲಕ 1961ರ ಐಟಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ. 2026ರ ಏಪ್ರಿಲ್ನಿಂದ ನೂತನ ಕಾಯ್ದೆ ಜಾರಿಗೆ ಬರುವ ಸಾಧ್ಯತೆ ಇದೆ. ನೂತನ ಮಸೂದೆ ತೆರಿಗೆ ಕಾನೂನುಗಳನ್ನು ಸರಳಗೊಳಿಸಲಿದೆ ಎಂದು ಸರಕಾರ ಹೇಳಿದರೆ, ತೆರಿಗೆ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರವನ್ನು ಹಸ್ತಾಂತರಿಸುವ ನಿಬಂಧನೆಯಾಗಿದೆ ಎಂದು ಹೇಳಲಾಗಿದೆ.
ನೂತನ ತೆರಿಗೆ ಮಸೂದೆಯು, ತೆರಿಗೆ ವಂಚನೆ ಕುರಿತ ತನಿಖೆಯ ಭಾಗವಾಗಿ ಅಧಿಕಾರಿಗಳಿಗೆ ವ್ಯಕ್ತಿಯ ವೈಯಕ್ತಿಕ ಇಮೇಲ್ಗಳು, ಬ್ಯಾಂಕ್ ಖಾತೆಗಳು, ಆನ್ಲೈನ್ ಹೂಡಿಕೆ ಖಾತೆಗಳು, ವ್ಯಾಪಾರ ಖಾತೆಗಳು, ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಲು ಅಧಿಕಾರವನ್ನು ನೀಡಲಿದೆ ಎಂದು ಹೇಳಲಾಗಿದೆ.
ನೂತನ ಅದಾಯ ತೆರಿಗೆ ಮಸೂದೆ ಜಾರಿಗೆ ಬಂದರೆ, ಭಾರತೀಯರಲ್ಲಿ ಯಾರಾದರೂ ತೆರಿಗೆ ಪಾವತಿಸಿಲ್ಲದಿದ್ದರೆ ಅಥವಾ ಯಾವುದೇ ಅಘೋಷಿತ ಆಸ್ತಿಗಳು, ನಗದು, ಚಿನ್ನ, ಆಭರಣಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿರಬಹುದು ಎಂದು ಅನುಮಾನಿಸಿದರೆ, ಅಂತಹವರ ಖಾತೆಗಳನ್ನು ಅಧಿಕಾರಿಗಳು ತನಿಖೆ ಮಾಡಲು ಮಸೂದೆಯು ಅವಕಾಶ ನೀಡಲಿದೆ ಎಂದು ಹೇಳಲಾಗುತ್ತಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪರಿಷ್ಕೃತ ಆದಾಯ ತೆರಿಗೆ ಮಸೂದೆ-2025 ಅನ್ನು ಸಂಸತ್ತಿನಲ್ಲಿ ಮಂಡಿಸಿದರು. ಇದು ಆರು ದಶಕಗಳಷ್ಟು ಹಳೆಯದಾದ ತೆರಿಗೆ ಚೌಕಟ್ಟಿನ ಕೂಲಂಕುಷ ಪರೀಕ್ಷೆ ಎಂದು ಕರೆದರು. ಆದರೆ ಇದು ಕಾನೂನು ಆಗುವ ಮೊದಲು, ಆಯ್ಕೆ ಸಮಿತಿಯು ಅದನ್ನು ಪರಿಶೀಲಿಸಲಿದೆ.
1961ರ ಆದಾಯ ತೆರಿಗೆ ಕಾಯ್ದೆಯಲ್ಲಿ ಡಿಜಿಟಲ್ ದಾಖಲೆಗಳನ್ನು ಉಲ್ಲೇಖಿಸದ ಕಾರಣ, ಅಧಿಕಾರಿಗಳಿಗೆ ಪರಿಶೀಲನೆಗೆ ಸಾಮಾನ್ಯವಾಗಿ ಕಾನೂನು ಅಡೆತಡೆಗಳು ಉಂಟಾಗುತ್ತದೆ. ಆದರೆ ಹೊಸ ಕಾಯ್ದೆಯು ಲ್ಯಾಪ್ಟಾಪ್ಗಳು, ಹಾರ್ಡ್ ಡ್ರೈವ್ಗಳು ಮತ್ತು ಇಮೇಲ್ಗಳನ್ನು ಪರಿಶೀಲಿಸಲು ಅವಕಾಶ ನೀಡಲಿದೆ.
ಹೊಸ ಆದಾಯ ತೆರಿಗೆ ಮಸೂದೆಯ ನಿಯಮಾವಳಿ 247ರ ಪ್ರಕಾರ, ಆದಾಯ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆ ಬಗ್ಗೆ ತನಿಖೆಯ ಭಾಗವಾಗಿ ಏಪ್ರಿಲ್ 1, 2026ರಿಂದ ನಿಮ್ಮ ಇಮೇಲ್ಗಳು, ಸಾಮಾಜಿಕ ಮಾಧ್ಯಮ ಖಾತೆಗಳು, ಬ್ಯಾಂಕ್ ವಿವರಗಳು ಮತ್ತು ಹೂಡಿಕೆ ಖಾತೆಗಳನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿರಲಿದ್ದಾರೆ ಎಂದು ಹೇಳಲಾಗಿದೆ. ಕಾನೂನು ತಜ್ಞರು ಈ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಆದಾಯ ತೆರಿಗೆ ಕಾಯ್ದೆ 1961ರಲ್ಲಿ ಪ್ರಮುಖ ಬದಲಾವಣೆಯಾಗಲಿದೆ. ಈ ಅಧಿಕಾರಗಳು ಕಿರುಕುಳ ಮತ್ತು ವೈಯಕ್ತಿಕ ಡೇಟಾದ ಅನಗತ್ಯ ಪರಿಶೀಲನೆಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದಾರೆ.