ಕೆಯುಡಬ್ಲ್ಯುಜೆ ಮಹಾರಾಷ್ಟ್ರ ಘಟಕ ಅಸ್ತಿತ್ವಕ್ಕೆ: ಅಧ್ಯಕ್ಷರಾಗಿ ರೋನ್ಸ್ ಬಂಟ್ವಾಳ್ ಆಯ್ಕೆ
ರೋನ್ಸ್ ಬಂಟ್ವಾಳ್ | ಡಾ.ಶಿವ ಮೂಡಿಗೆರೆ | ಸಾ.ದಯಾ
ಮುಂಬೈ, ಜ.1: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲ್ಯುಜೆ)ದ ಮಹಾರಾಷ್ಟ್ರ ಘಟಕ ಅಸ್ತಿತ್ವಕ್ಕೆ ಬಂದಿದ್ದು, ನೂತನ ಅಧ್ಯಕ್ಷರಾಗಿ ರೋನ್ಸ್ ಬಂಟ್ವಾಳ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಡಾ.ಶಿವ ಮೂಡಿಗೆರೆ ಆಯ್ಕೆಗೊಂಡರು.
ಇತ್ತೀಚೆಗೆ (ಡಿ.23) ಮುಂಬೈಯ ಅಂಧೇರಿ ಪೂರ್ವದ ಕ್ಲಬ್ ಹೌಸ್ ನ ಸಭಾಗೃಹದಲ್ಲಿ ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ನೂತನ ಘಟಕವನ್ನು ರಚಿಸಲಾಯಿತು.
ಸಮಾರಂಭದಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ರೋನ್ಸ್ ಬಂಟ್ವಾಳ್ ಮತ್ತು ಡಾ.ಶಿವ ಮೂಡಿಗೆರೆ ಅವರಿಗೆ ಸಾಂಕೆತಿಕವಾಗಿ ಕೆಯುಡಬ್ಲ್ಯುಜೆ ಗುರುತುಪತ್ರ ವಿತರಿಸಿದರು. ಶಿವಾನಂದ ತಗಡೂರು ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. ಕರ್ನಾಟಕ ಕೃಷಿ ಸಚಿವ ಚೆಲುವರಾಯಸ್ವಾಮಿ ಉಪಸ್ಥಿತರಿದ್ದರು.
ಬಳಿಕ ಕೆಯುಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕೆಯುಡಬ್ಲ್ಯುಜೆ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಭವಾನಿ ಸಿಂಗ್ ಠಾಕೂರ್, ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಮ, ನಿಂಗಪ್ಪ ಚಾವಡಿ, ಸೋಮಶೇಖರ ಕೆರಗೋಡು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಖಜಾಂಚಿ ಎಂ.ವಾಸುದೇವ ಹೊಳ್ಳ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಸುನೀತಾ ಎಂ. ಶೆಟ್ಟಿ ವೇದಿಕೆಯಲ್ಲಿದ್ದು, ಕೆಯುಡಬ್ಲ್ಯುಜೆ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಸಭೆಯಲ್ಲಿ ನೂತನ ಮಹಾರಾಷ್ಟ್ರ ಘಟಕದ 2024-2027ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ರೋನ್ಸ್ ಬಂಟ್ವಾಳ್ (ಅಧ್ಯಕ್ಷ), ಡಾ.ಶಿವ ಮೂಡಿಗೆರೆ (ಪ್ರಧಾನ ಕಾರ್ಯದರ್ಶಿ), ವಿಶ್ವನಾಥ್ ಪೂಜಾರಿ ನಿಡ್ಡೋಡಿ, ಸವಿತಾ ಸುರೇಶ್ ಶೆಟ್ಟಿ, ಸದರಾಮ ಎನ್.ಶೆಟ್ಟಿ ಸಂಪದಮನೆ (ಉಪಾಧ್ಯಕ್ಷರು), ಅಶೋಕ್ ಆರ್. ದೇವಾಡಿಗ, ರಾಜೇಶ್ ಪಿ. ಗೌಡ, ಅನಿತಾ ಪಿ. ಪೂಜಾರಿ ತಾಕೋಡೆ (ಕಾರ್ಯದರ್ಶಿಗಳು), ಸಾ.ದಯಾ (ಕೋಶಾಧಿಕಾರಿ) ನೇಮಿಸಲ್ಪಪಟ್ಟರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಡಾ.ಜಿ.ಪಿ.ಕುಸುಮಾ, ಡಾ.ದಿನೇಶ್ ಶೆಟ್ಟಿ ರೆಂಜಾಳ, ರಂಗ ಎಸ್. ಪೂಜಾರಿ, ಶ್ಯಾಮ್ ಎಂ. ಹಂಧೆ, ಹರೀಶ್ ಪೂಜಾರಿ ಕೊಕ್ಕರ್ಣೆ, ಡಾ.ದುರ್ಗಪ್ಪ ವೈ. ಕೋಟಿಯವರ್ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳಾಗಿ ಗೋಪಾಲ ಪೂಜಾರಿ ತ್ರಾಸಿ ಚಂದ್ರಶೇಖರ್ ಆರ್. ಬೆಳ್ಚಡ ಆಯ್ಕೆಯಾದರು.