ಸಂಗಾತಿ ಜೀವಂತವಾಗಿದ್ದರೆ ಮುಸ್ಲಿಮರು ‘ಸಹಜೀವನ’ದ ಹಕ್ಕನ್ನು ಕೇಳುವಂತಿಲ್ಲ: ಅಲಹಾಬಾದ್ ಹೈಕೋರ್ಟ್
ಅಲಹಾಬಾದ್ ಹೈಕೋರ್ಟ್ | PTI
ಅಲಹಾಬಾದ್: ಸಂಗಾತಿ ಬದುಕಿದ್ದರೆ ಮುಸ್ಲಿಮರು ‘ಸಹಜೀವನ’ದ ಹಕ್ಕನ್ನು ಕೇಳುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ತಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳದಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಓರ್ವ ಹಿಂದೂ ಮಹಿಳೆ ಮತ್ತು ಓರ್ವ ಮುಸ್ಲಿಮ್ ಪುರುಷ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಥಾವುರ್ರಹ್ಮಾನ್ ಮಸೂದಿ ಮತ್ತು ಅಜಯ್ ಕುಮಾರ್ ಶ್ರೀವಾಸ್ತವ ಅವರನ್ನೊಳಗೊಂಡ ನ್ಯಾಯಪೀಠವೊಂದು ಈ ಮಾತನ್ನು ಹೇಳಿದೆ. ತಾವು ಸಹಜೀವನ ನಡೆಸುತ್ತಿದ್ದೇವೆ ಎಂದು ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಮಹಿಳೆಯ ಹೆತ್ತವರು ಪುರುಷನ ವಿರುದ್ಧ ದೂರು ದಾಖಲಿಸಿದ್ದರು. ಆ ವ್ಯಕ್ತಿಯು ತಮ್ಮ ಮಗಳನ್ನು ಅಪಹರಿಸಿ ತನ್ನನ್ನು ಮದುವೆಯಾಗುವಂತೆ ಬಲವಂತಪಡಿಸುತ್ತಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಜೀವ ಮತ್ತು ಸ್ವಾತಂತ್ರ್ಯಕ್ಕೆ ರಕ್ಷಣೆ ನೀಡಬೇಕು ಎಂದು ಈ ಜೋಡಿ ಒತ್ತಾಯಿಸಿದೆ. ತಾವು ವಯಸ್ಕರಾಗಿದ್ದು, ಜೊತೆಗೆ ವಾಸಿಸಲು ಸ್ವತಂತ್ರರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಆದರೆ, ಎಪ್ರಿಲ್ 30ರಂದು ಆದೇಶ ನೀಡಿರುವ ನ್ಯಾಯಾಲಯವು, ಈ ವ್ಯಕ್ತಿಗೆ ಈಗಾಗಲೇ ಮದುವೆಯಾಗಿದ್ದು, ಐದು ವರ್ಷದ ಹೆಣ್ಣು ಮಗುವಿದೆ ಎಂದು ಹೇಳಿದೆ.
‘‘ಮದುವೆ ಊರ್ಜಿತವಾಗಿರುವ ಅವಧಿಯಲ್ಲಿ, ಸಹಜೀವನ ನಡೆಸಲು ಇಸ್ಲಾಮಿಕ್ ನಿಯಮಗಳು ಅವಕಾಶ ನೀಡುವುದಿಲ್ಲ’’ ಎಂದು ನ್ಯಾಯಪೀಠ ಹೇಳಿತು.
‘‘ಇಬ್ಬರು ವ್ಯಕ್ತಿಗಳು ಅವಿವಾಹಿತರಾಗಿದ್ದರೆ ಮತ್ತು ತಮ್ಮ ಬದುಕನ್ನು ತಮಗೆ ಬೇಕಾದ ಹಾಗೆ ರೂಪಿಸುವಷ್ಟು ಪ್ರಾಪ್ತ ವಯಸ್ಕರಾಗಿದ್ದರೆ, ಪರಿಸ್ಥಿತಿ ಭಿನ್ನವಾಗಿರಬಹುದು. ಅಂಥ ಸಂದರ್ಭದಲ್ಲಿ, ಇಂಥ ಜೋಡಿಯ ರಕ್ಷಣೆಗೆ ಸಾಂವಿಧಾನಿಕ ನೈತಿಕತೆ ಬರಬಹುದು. ಸಾಮಾಜಿಕ ನೈತಿಕತೆಯ ಸ್ಥಾನವನ್ನು ಸಾಂವಿಧಾನಿಕ ನೈತಿಕತೆ ವಹಿಸಿಕೊಳ್ಳಬಹುದು’’ ಎಂದು ನ್ಯಾಯಾಲಯ ಹೇಳಿತು.
ಪುರುಷರ ಪತ್ನಿಯ ಹಕ್ಕುಗಳು ಮತ್ತು ಮಗುವಿನ ಹಿತಾಸಕ್ತಿಯನ್ನು ಪರಿಗಣಿಸಿ ಸಹಜೀವನಕ್ಕೆ ತಾನು ರಕ್ಷಣೆ ನೀಡುವಂತಿಲ್ಲ ಎಂದು ನ್ಯಾಯಾಲಯ ಹೇಳಿತು.