ಅದಾನಿಯ ವಿದೇಶಿ ಫಂಡ್ ಗಳಲ್ಲಿ ಸೆಬಿ ಮುಖ್ಯಸ್ಥೆ ಹೂಡಿಕೆ : ಹಿಂಡೆನ್ ಬರ್ಗ್ ನಿಂದ ಸ್ಫೋಟಕ ವರದಿ
ಮಾಧಬಿ ಪುರಿ ಬುಚ್ - ಅದಾನಿ
ಹೊಸದಿಲ್ಲಿ : ಉದ್ಯಮ ದಿಗ್ಗಜ ಗೌತಮ ಅದಾನಿಯನ್ನು ಗುರಿಯಾಗಿಸಿಕೊಂಡ ಒಂದೂವರೆ ವರ್ಷಗಳ ಬಳಿಕ ಅಮೆರಿಕ ಮೂಲದ ಹಿಂಡೆನ್ಬರ್ಗ್ ರೀಸರ್ಚ್, ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರು ಅದಾನಿ ಗ್ರೂಪ್ ತನ್ನ ಷೇರುಗಳ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಲು ಬಳಸುತ್ತಿದ್ದ ವಿದೇಶಿ ನಿಧಿಗಳಲ್ಲಿ ಹೂಡಿಕೆಗಳನ್ನು ಹೊಂದಿದ್ದರು ಎಂದು ಶನಿವಾರ ಆರೋಪಿಸಿದೆ.
ಸೆಬಿಯ ಹಾಲಿ ಮುಖ್ಯಸ್ಥೆ ಮತ್ತು ಅವರ ಪತಿ ಧವಲ್ ಬುಚ್ ಅವರು ವಿನೋದ ಅದಾನಿಯ ಬರ್ಮುಡಾ ಮತ್ತು ಮಾರಿಷಸ್ ನಲ್ಲಿರುವ ರಹಸ್ಯ ಫಂಡ್ ಗಳಲ್ಲಿ ಗುಪ್ತವಾಗಿ ಪಾಲುಗಳನ್ನು ಹೊಂದಿದ್ದರು ಎಂದು ಹಿಡೆನ್ಬರ್ಗ್ ತನ್ನ ವರದಿಯಲ್ಲಿ ಹೇಳಿದೆ.
ವಿಸಲ್ಬ್ಲೋವರ್ ದಾಖಲೆಗಳನ್ನು ಉಲ್ಲೇಖಿಸಿರುವ ವರದಿಯು, ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ 2015, ಜೂ.5ರಂದು ಸಿಂಗಾಪುರದ ಐಪಿಇ ಪ್ಲಸ್ ಫಂಡ್ 1ರಲ್ಲಿ ತಮ್ಮ ಖಾತೆಗಳನ್ನು ತೆರೆದಿದ್ದಂತೆ ಕಂಡುಬಂದಿದೆ ಎಂದು ಹೇಳಿದೆ. ಸಾಗರೋತ್ತರ ಮಾರಿಷಸ್ ಫಂಡ್ನ್ನು ಅದಾನಿ ಗ್ರೂಪ್ ನ ನಿರ್ದೇಶಕರೋರ್ವರು ಇಂಡಿಯಾ ಇನ್ಫೋಲೈನ್ ಮೂಲಕ ಸ್ಥಾಪಿಸಿದ್ದರು ಮತ್ತು ಅದನ್ನು ತೆರಿಗೆ ಸ್ವರ್ಗ ಮಾರಿಷಸ್ ನಲ್ಲಿ ನೋಂದಾಯಿಸಿದ್ದರು ಎಂದು ಹಿಂಡೆನ್ಬರ್ಗ್ ಪ್ರತಿಪಾದಿಸಿದೆ.
‘ಅದಾನಿ ಗ್ರೂಪ್ ನಲ್ಲಿಯ ಶಂಕಿತ ಸಾಗರೋತ್ತರ ಷೇರುದಾರರ ವಿರುದ್ಧ ಅರ್ಥಪೂರ್ಣ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಸೆಬಿಗೆ ಇಷ್ಟವಿದ್ದಿರದಿದ್ದಕ್ಕೆ ಗೌತಮ ಅದಾನಿಯವರ ಸೋದರ ವಿನೋದ ಅದಾನಿ ಬಳಸಿದ್ದ ಫಂಡ್ ಗಳಲ್ಲಿ ಮಾಧವಿ ಬುಚ್ ಕೂಡಾ ಹೂಡಿಕೆ ಹೊಂದಿದ್ದು ಕಾರಣವಾಗಿತ್ತು ಎಂದು ನಾವು ಶಂಕಿಸಿದ್ದೇವೆ’ ಎಂದು ಹಿಂಡೆನ್ಬರ್ಗ್ ಹೇಳಿದೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ದಾಖಲೆಗಳಿಂದ ನಕಲು ಪ್ರತಿಯನ್ನೂ ಹಿಂಡೆನ್ಬರ್ಗ್ ಪ್ರಸ್ತುತ ಪಡಿಸಿದೆ. ಸೆಬಿ ಮುಖ್ಯಸ್ಥೆ ತನ್ನ ಪತಿ ನಿರ್ದೇಶಕರಾಗಿರುವ ಅಗೋರಾ ಅಡ್ವೈಸರಿ ಹೆಸರಿನ ಕನ್ಸಲ್ಟಿಂಗ್ ಬಿಸಿನೆಸ್ನಲ್ಲಿ ಶೇ.99ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಈ ದಾಖಲೆಯು ಮೇಲ್ನೋಟಕ್ಕೆ ತೋರಿಸಿದೆ.
2022ರಲ್ಲಿ ಈ ಸಂಸ್ಥೆಯು ಕನ್ಸಲ್ಟಿಂಗ್ನಿಂದ 2,61,000 ಡಾಲರ್ ಆದಾಯವನ್ನು ವರದಿ ಮಾಡಿದ್ದು, ಇದು ಮಾಧವಿ ಬುಚ್ ಬಹಿರಂಗಗೊಳಿಸಿರುವ ತನ್ನ ಸೆಬಿ ವೇತನದ 4.4 ಪಟ್ಟು ಆಗಿದೆ ಎಂದು ಹೇಳಿರುವ ವರದಿಯು,ಸಾಗರೋತ್ತರ ಸಿಂಗಾಪುರ ಸಂಸ್ಥೆಗೆ ಹಣಕಾಸು ಹೇಳಿಕೆಗಳನ್ನು ಬಹಿರಂಗಗೊಳಿಸುವುದರಿಂದ ವಿನಾಯಿತಿಯನ್ನು ನೀಡಲಾಗಿತ್ತು. ಇದು ಅದು ತನ್ನ ಕನ್ಸ್ಲ್ಟಿಂಗ್ ವ್ಯವಹಾರದಿಂದ ಗಳಿಸಿದ್ದ ಆದಾಯದ ಮೊತ್ತ ಮತ್ತು ಅದನ್ನು ಯಾರಿಂದ ಪಡೆದಿತ್ತು ಎನ್ನುವುದು ಅಸ್ಪಷ್ಟವಾಗಿರಲು ಅವಕಾಶ ಕಲ್ಪಿಸಿತ್ತು ಎಂದು ಹೇಳಿದೆ.