ತಿರುಪತಿ ದೇವಸ್ಥಾನಕ್ಕೆ ತುಪ್ಪ ಸರಬರಾಜು ಮಾಡಿಲ್ಲ: ʼಅಮುಲ್ʼ ಸ್ಪಷ್ಟನೆ
ತಿರುಪತಿ ದೇವಸ್ಥಾನ (Photo: PTI)
ಹೊಸದಿಲ್ಲಿ: ಆಂಧ್ರದ ತಿರುಪತಿ ಜಿಲ್ಲೆಯ ತಿರುಮಲ ದೇಗುಲದಲ್ಲಿ ನೀಡುವ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ಆರೋಪಗಳ ಮಧ್ಯೆ ಅಮುಲ್ (Amul) ಸ್ಪಷ್ಟನೆ ನೀಡಿದ್ದು, ತಿರುಮಲ ತಿರುಪತಿ ದೇವಸ್ಥಾನಕ್ಕೆ(ಟಿಟಿಡಿ) ತುಪ್ಪವನ್ನು ಪೂರೈಸಿಲ್ಲ ಎಂದು ಹೇಳಿದೆ.
ತಿರುಮಲ ದೇವಸ್ಥಾನಕ್ಕೆ (ಟಿಟಿಡಿ) ಅಮುಲ್ ತುಪ್ಪವನ್ನು ಸರಬರಾಜು ಮಾಡುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳು ಕಾಣಿಸಿಕೊಂಡಿದ್ದವು. ಇದರ ಬೆನ್ನಲ್ಲೇ Amul ಸಂಸ್ಥೆ ಈ ಕುರಿತು ಎಕ್ಸ್ ನಲ್ಲಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದು, ಅಮುಲ್ ತುಪ್ಪ ತಿರುಮಲ ದೇವಸ್ಥಾನಕ್ಕೆ ಎಂದಿಗೂ ಸರಬರಾಜು ಮಾಡಿಲ್ಲ ಎಂದು ಹೇಳಿದೆ.
ಅಮುಲ್ ತುಪ್ಪವನ್ನು ಹಾಲಿನಿಂದ ತಯಾರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲು ನಾವು ಬಯಸುತ್ತೇವೆ, ಅವುಗಳು ISO ಪ್ರಮಾಣೀಕೃತವಾಗಿವೆ. ಅಮುಲ್ ತುಪ್ಪವನ್ನು ಉತ್ತಮ ಗುಣಮಟ್ಟದ ಶುದ್ಧ ಹಾಲಿನ ಕೊಬ್ಬಿನಿಂದ ತಯಾರಿಸಲಾಗುತ್ತದೆ. ಎಫ್ಎಸ್ಎಸ್ಎಐ ಕಲಬೆರಕೆ ಪತ್ತೆ ಸೇರಿದಂತೆ ಗುಣಮಟ್ಟದ ತಪಾಸಣೆಯನ್ನು ಕೂಡ ನಡೆಸಲಾಗಿದೆ ಎಂದು ಹೇಳಿದೆ.
ವೈಎಸ್ಆರ್ಸಿಪಿ ಆಡಳಿತದಲ್ಲಿ ತಿರುಪತಿಯ ವೆಂಕಟೇಶ್ವರ ದೇವಸ್ಥಾನದಲಿ ಪ್ರಸಾದವಾಗಿ ನೀಡುತ್ತಿದ್ದ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಸೇರಿದಂತೆ ಗುಣಮಟ್ಟವಿಲ್ಲದ ಪದಾರ್ಥಗಳನ್ನು ಬಳಸಲಾಗಿತ್ತು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೊದಲು ಹೇಳಿಕೆ ನೀಡಿದ್ದರು.
ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ, ಧಾರ್ಮಿಕ ವಿಷಯಗಳಲ್ಲಿ ಟಿಡಿಪಿ ರಾಜಕೀಯ ಮಾಡುತ್ತಿದೆ ಎಂದು ಹೇಳಿದ್ದಾರೆ.