ಕಾದು, ಯೋಚಿಸಿ ನಂತರ ಕ್ರಮ ಕೈಗೊಳ್ಳಿ: ಡಿಜಿಟಲ್ ಬಂಧನ ವಂಚನೆಯ ಕುರಿತು ಪ್ರಧಾನಿ ಮೋದಿ ಕಿವಿಮಾತು
"ಕಾನೂನಿನಲ್ಲಿ ಡಿಜಿಟಲ್ ಬಂಧನದಂಥ ಯಾವುದೇ ವ್ಯವಸ್ಥೆಯಿಲ್ಲ"
ಪ್ರಧಾನಿ ನರೇಂದ್ರ ಮೋದಿ (Photo: indiatoday.in)
ಹೊಸದಿಲ್ಲಿ: ಡಿಜಿಟಲ್ ಬಂಧನದ ಹೆಸರಿನಲ್ಲಿ ವಂಚಿಸುತ್ತಿರುವ ಸೈಬರ್ ಕ್ರಿಮಿನಲ್ ಗಳ ಬಗ್ಗೆ ಜನರು ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಈ ಸಮಸ್ಯೆಯ ವಿರುದ್ಧ ಹೋರಾಡಲು ವಿವಿಧ ತನಿಖಾ ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ ಎಂದೂ ಹೇಳಿದ್ದಾರೆ.
ಡಿಜಿಟಲ್ ಬಂಧನ ಹಗರಣವನ್ನು ಗಂಭೀರ ಸಮಸ್ಯೆ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಇಂತಹ ವಂಚನೆಗಳನ್ನು ತಪ್ಪಿಸಿಕೊಳ್ಳಲು “ಕಾದು, ಯೋಚಿಸಿ, ನಂತರ ಕ್ರಮ ಕೈಗೊಳ್ಳುವ’ ಧೋರಣೆಯನ್ನು ಬೆಳೆಸಿಕೊಳ್ಳಿ ಎಂದು ಜನರಿಗೆ ಮನವಿ ಮಾಡಿದ್ದಾರೆ.
ಡಿಜಿಟಲ್ ಬಂಧನ ಒಂದು ಬಗೆಯ ಸೈಬರ್ ಅಪರಾಧವಾಗಿದ್ದು, ಕಾನೂನು ಜಾರಿ ಅಧಿಕಾರಿಗಳಂತೆ ಸೋಗು ಹಾಕುವ ವಂಚಕರು, ಒಂದು ವೇಳೆ ನಿರ್ದಿಷ್ಟ ಮೊತ್ತವನ್ನು ಪಾವತಿಸದಿದ್ದರೆ, ನಿಮ್ಮನ್ನು ಬಂಧಿಸಲಾಗುವುದು ಎಂದು ಸಂತ್ರಸ್ತರಿಗೆ ಬೆದರಿಕೆ ಒಡ್ಡುತ್ತಾರೆ. ಇತ್ತೀಚೆಗೆ ಇಂತಹ ಅಸಂಖ್ಯಾತ ವಂಚನೆ ಪ್ರಕರಣಗಳು ದೇಶಾದ್ಯಂತ ವರದಿಯಾಗಿವೆ.
ಮಾಸಿಕ ʼಮನ್ ಕಿ ಬಾತ್ʼ ರೇಡಿಯೊ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, “ಕಾನೂನಿನಲ್ಲಿ ಡಿಜಿಟಲ್ ಬಂಧನದಂಥ ಯಾವುದೇ ವ್ಯವಸ್ಥೆಯಿಲ್ಲ. ಅದು ಕೇವಲ ವಂಚನೆ, ಮೋಸ, ಸುಳ್ಳಾಗಿದ್ದು, ಇಂತಹ ಕೃತ್ಯವನ್ನು ಮಾಡುತ್ತಿರುವ ಕ್ರಿಮಿನಲ್ ಗಳ ಗುಂಪು ಸಮಾಜದ ಶತ್ರುವಾಗಿದೆ. ಡಿಜಿಟಲ್ ಬಂಧನದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಯಲು ವಿವಿಧ ತನಿಖಾ ಸಂಸ್ಥೆಗಳು ರಾಜ್ಯ ಸರಕಾರಗಳ ಸಮನ್ವಯದೊಂದಿಗೆ ಕಾರ್ಯಾಚರಿಸುತ್ತಿವೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ ತನಿಖಾಧಿಕಾರಿಗಳಂತೆ ಸೋಗು ಹಾಕುವ ವಂಚಕರ ಪ್ರಾತಿನಿಧಿಕ ವಿಡಿಯೊವನ್ನು ಪ್ರದರ್ಶಿಸಿದ ಪ್ರಧಾನಿ ಮೋದಿ, “ಡಿಜಿಟಲ್ ಬಂಧನ ವಂಚನೆಗಳ ಕುರಿತು ಎಚ್ಚರದಿಂದಿರಿ. ಇಂತಹ ತನಿಖೆಗೆ ಯಾವುದೇ ತನಿಖಾ ಸಂಸ್ಥೆಯೂ ನಿಮ್ಮನ್ನು ಫೋನ್ ಅಥವಾ ವಿಡಿಯೊ ಕರೆ ಮೂಲಕ ಸಂಪರ್ಕಿಸುವುದಿಲ್ಲ” ಎಂದೂ ಕಿವಿಮಾತು ಹೇಳಿದ್ದಾರೆ.
ಇಂತಹ ವಂಚನೆಗಳ ಕುರಿತು ತನಿಖೆ ನಡೆಸುತ್ತಿರುವ ವಿವಿಧ ತನಿಖಾ ಸಂಸ್ಥೆಗಳ ನಡುವೆ ಸಮನ್ವಯವೇರ್ಪಡಿಸಲು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.