ಮೊದಲ ವಿಮಾನ ತಯಾರಿಸಿದ್ದು ಭಾರದ್ವಾಜ ಮುನಿ; ರೈಟ್ ಸಹೋದರರಲ್ಲ: ಉತ್ತರ ಪ್ರದೇಶ ರಾಜ್ಯಪಾಲೆ
ಆನಂದಿಬೆನ್ PC: facebook.com/anandiben
ಲಕ್ನೋ: ಮೊಟ್ಟಮೊದಲು ವಿಮಾನವನ್ನು ತಯಾರಿಸಿದ್ದು ರೈಟ್ ಸಹೋದರರಲ್ಲ. ಭಾರದ್ವಾಜ ಮುನಿಗಳು ಮೊಟ್ಟಮೊದಲ ವಿಮಾನವನ್ನು ಕಂಡುಹಿಡಿದು ಮುಂಬೈನ ಚೌಪಟ್ಟಿಯಲ್ಲಿ ಒಂದು ಕಿಲೋಮೀಟರ್ ದೂರಕ್ಕೆ ಹಾರಿಸಿದ್ದರು. ಭಾರತದ ಪುರಾಣದಲ್ಲಿ ಬರುವ ಪುಷ್ಪಕ ವಿಮಾನಕ್ಕೆ 5000 ವರ್ಷಗಳ ಇತಿಹಾಸವಿದೆ. ಕುಂಭಕರ್ಣ ರಹಸ್ಯ ಶಸ್ತ್ರಾಸ್ತ್ರಗಳ ತಂತ್ರಜ್ಞ ಎಂದು ಉತ್ತರಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಹೇಳಿಕೆ ನೀಡುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.
ಪ್ರಾಚೀನ ಭಾರತೀಯ ತಂತ್ರಜ್ಞಾನ ಸಾಧನೆಗಳ ಪರಂಪರೆ ಬಗ್ಗೆ ಖ್ವಾಜಾ ಮುಈನುದ್ದೀನ್ ಚಿಶ್ತಿ ಭಾಷಾ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದರು. "ಹೊರಗಿನಿಂದ ಬಂದವರು ನಮ್ಮ ತಂತ್ರಜ್ಞಾನ ಹಾಗೂ ಕಲ್ಪನೆಗಳನ್ನು ಒಯ್ದು ಹಲವು ಸಂಶೋಧನೆಗಳನ್ನು ನಡೆಸಿದರು. ನಮ್ಮ ಸಂಶೋಧನೆಗಳ ಬಗ್ಗೆ ಓದಿ ನಾವು ಜ್ಞಾನ ಸಂಪಾದಿಸಬೇಕು" ಎಂದರು.
ಪೌರಾಣಿಕ ಪಾತ್ರ ರಾವಣನ ಹಾರುವ ಯಂತ್ರದ ಬಗ್ಗೆ ವಿವರಿಸುವ ಸಂದರ್ಭದಲ್ಲಿ ಭಾರದ್ವಾಜ್ ಅವರು ವಿಮಾನ ತಯಾರಿಸಿದ ಅಂಶವನ್ನು ಉಲ್ಲೇಖಿಸಿದರು. "ಸೀತಾ ಮಾತೆಯನ್ನು ರಾವಣ ಪುಷ್ಪಕ ವಿಮಾನದಲ್ಲಿ ಒಯ್ದ ಅಂಶ ಹಲವು ಮಂದಿಗೆ ತಿಳಿದಿಲ್ಲ. ಇದು 5000 ವರ್ಷ ಹಳೆಯ ಸಂಶೋಧನೆ. ಆದರೆ ಪುಷ್ಪಕ ವಿಮಾನವನ್ನು ಯಾರು ಎಲ್ಲಿ ಮಾಡಿದರು ಎನ್ನುವುದು ಗೊತ್ತೇ" ಎಂದು ಅವರು ಪ್ರಶ್ನಿಸಿದರು.
2015ರ ಭಾರತೀಯ ವಿಜ್ಞಾನ ಕಾಂಗ್ರೆಸ್ ನಲ್ಲಿ ಪ್ರಸ್ತುತಪಡಿಸಿದ್ದ ಪ್ರಬಂಧದಲ್ಲಿ ಶಿವಶಂಕರ್ ಬಾಪೂಜಿ ತಾಲ್ಪಡೆ ಎಂಬುವವರು 1895ರಲ್ಲಿ ಮುಂಬೈನ ಚೌಪತಿಯಲ್ಲಿ ಮೊಟ್ಟಮೊದಲ ವಿಮಾನ ಹಾರಾಟ ನಡೆಸಿದ್ದರು ಎಂದು ಪ್ರತಿಪಾದಿಸಲಾಗಿತ್ತು. ಅಧಿಕೃತವಾಗಿ ಉತ್ತರ ಕರೋಲಿನಾದಲ್ಲಿ 1903ರ ಡಿಸೆಂಬರ್ 17ರಂದು ಒರ್ವಿಲ್ ಮತ್ತು ವಿಲ್ಬರ್ ರೈಟ್ ಸಹೋದರರು ಮೊಟ್ಟಮೊದಲ ವಿಮಾನ ಹಾರಾಟ ನಡೆಸಿದ್ದಾರೆ.
ಕುಂಭಕರ್ಣನನ್ನು ಅದ್ಭುತ ತಂತ್ರಜ್ಞ ಎಂದೂ ಪಟೇಲ್ ಬಣ್ಣಿಸಿದ್ದು, ಇತರ ಯಾವ ದೇಶಗಳೂ ಕದಿಯಲು ಸಾಧ್ಯವಾಗದಂತೆ ಆತ ರಹಸ್ಯ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿದ್ದ ಎಂದು ಹೇಳಿದ್ದಾರೆ.