26/11ರ ಮುಂಬೈ ದಾಳಿ ಪ್ರಕರಣದ ಆರೋಪಿ ತಹಾವುರ್ ರಾಣಾ18 ದಿನಗಳ ಕಾಲ ಎನ್ಐಎ ಕಸ್ಟಡಿಗೆ

Photo credit: ANI
ಮುಂಬೈ: ಅಮೆರಿಕದಿಂದ ಗಡೀಪಾರಿಗೊಳಗಾಗಿರುವ 2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ದಾಳಿ ಪ್ರಕರಣದ ಪ್ರಮುಖ ಆರೋಪಿ ತಹಾವುರ್ ರಾಣಾನನ್ನು ನ್ಯಾಯಾಲಯವು 18 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ವಶಕ್ಕೆ ಒಪ್ಪಿಸಿದ್ದು, ಆತನ ವಿಚಾರಣೆ ಪ್ರಾರಂಭಗೊಂಡಿದೆ. 26/11 ಭಯೋತ್ಪಾದನಾ ದಾಳಿಯ ಸಂಬಂಧ ಅಮೆರಿಕದಿಂದ ಗಡೀಪಾರಿಗೊಳಗಾಗಿರುವ ತಹಾವುರ್ ರಾಣಾನನ್ನು ಭಾರತಕ್ಕೆ ಕರೆ ತರಲಾಗಿದೆ.
ತಹಾವುರ್ ರಾಣಾ ನಮ್ಮ ವಶದಲ್ಲಿದ್ದಾನೆ ಎಂದು ದೃಢಪಡಿಸಿರುವ ರಾಷ್ಟ್ರೀಯ ತನಿಖಾ ದಳ, ಆತನ ವಿಚಾರಣೆಯನ್ನು ಪ್ರಾರಂಭಿಸಿದೆ.
India Today ಸುದ್ದಿ ಸಂಸ್ಥೆಯ ಪ್ರಕಾರ, ತಹಾವುರ್ ರಾಣಾನನ್ನು ಭಾರತಕ್ಕೆ ಕರೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಷ್ಟ್ರೀಯ ತನಿಖಾ ದಳದ ಉಪ ಪೊಲೀಸ್ ವರಿಷ್ಠಾಧಿಕಾರಿ ಜಯ ರಾಯ್ ನೇತೃತ್ವದ 12 ಮಂದಿ ಸದಸ್ಯರ ತಂಡವೊಂದು ಆತನ ವಿಚಾರಣೆಯನ್ನು ನಿರ್ವಹಿಸುತ್ತಿದೆ. ಆತನನ್ನು ಸಂಪೂರ್ಣ ಕಣ್ಗಾವಲು ಹೊಂದಿರುವ ರಾಷ್ಟ್ರೀಯ ತನಿಖಾ ದಳದ ಕಚೇರಿಯ ಮೂರನೆ ಅಂತಸ್ತಿನಲ್ಲಿರುವ ಕೊಠಡಿಯೊಂದರಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ ಎನ್ನಲಾಗಿದೆ.
26/11 ಭಯೋತ್ಪಾದನಾ ದಾಳಿಯ ಯೋಜನೆ ಹಾಗೂ ಜಾರಿ, ಲಷ್ಕರ್-ಇ-ತೊಯ್ಬಾದೊಂದಿಗಿನ ಆತನ ಸಂಪರ್ಕ ಹಾಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐನೊಂದಿಗೆ ಆತ ಹೊಂದಿರಬಹುದಾದ ಸಂಬಂಧದ ಬಗ್ಗೆ ಸಂಪೂರ್ಣ ಸತ್ಯವನ್ನು ಪತ್ತೆ ಹಚ್ಚಲು ನಾವು ಬಯಸಿದ್ದೇವೆ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ.