ಕೇರಳದಲ್ಲಿ ನಿಫಾ ದೃಢ; ಕೇಂದ್ರದ ತಂಡ ರವಾನೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಇಬ್ಬರು ನಿಫಾ ವೈರಸ್ನಿಂದ ಮೃತಪಟ್ಟಿದ್ದು ದೃಡಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವೀಯ ದೃಢಪಡಿಸಿದ್ದಾರೆ. ನಿನ್ನೆ ಸೋಮವಾರ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರ ಅಸಹಜ ಸಾವಿನ ನಂತರ ಜಿಲ್ಲೆಯಾದ್ಯಂತ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ndtv ವರದಿ ಮಾಡಿದೆ.
ಕೇಂದ್ರದಿಂದ ಕೇರಳಕ್ಕೆ ತಂಡವನ್ನು ಕಳುಹಿಸಲಾಗಿದೆ. ನಿಫಾ ಕುರಿತು ರಾಜ್ಯಕ್ಕೆ ತಂಡ ನೆರವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಆಗಸ್ಟ್ 30 ರಂದು ಮೊದಲ ಪ್ರಕರಣ ದಾಖಲಾಗಿತ್ತು. ಎರಡನೇ ಪ್ರಕರಣ ನಿನ್ನೆ ವರದಿಯಾಗಿದೆ. ಕೋಝಿಕ್ಕೋಡ್ನಲ್ಲಿ ಈಗಾಗಲೇ ಕೇರಳ ಸರ್ಕಾರ ಕಂಟ್ರೋಲ್ ರೂಂ ಸ್ಥಾಪಿಸಿದೆ. ಜನರು ಮಾಸ್ಕ್ ಬಳಸುವಂತೆ ಸೂಚನೆ ನೀಡಿದೆ.
ನಿಫಾ ವೈರಸ್ ಕುರಿತು ಈಗಾಗಲೇ ಹೇಳಿಕೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಜನರು ಗಾಬರಿ ಪಡುವ ಅಗತ್ಯವಿಲ್ಲ, ಮುನ್ನೆಚ್ಚರಿಕೆ ಅಗತ್ಯ. ಮೃತ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗಿದೆ. ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಜನರು ಪಾಲಿಸಬೇಕು ಎಂದಿದ್ದಾರೆ.
ನಿಫಾ ವೈರಸ್ ಮೊದಲ ಬಾರಿಗೆ ಕೇರಳದ ಮಲ್ಲಪುರಂ ಜಿಲ್ಲೆಯಲ್ಲಿ 2018 ರಲ್ಲಿ ಪತ್ತೆಯಾಗಿತ್ತು. ಬಳಿಕ 2021ರಲ್ಲಿ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಕಂಡು ಬಂದಿತ್ತು.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ನಿಪಾಹ್ ವೈರಸ್ ಹಣ್ಣುಗಳನ್ನು ಕಚ್ಚುವ ಬಾವಲಿಗಳಿಂದ ಉಂಟಾಗುತ್ತದೆ. ಅದನ್ನು ಸೇವಿಸುವ ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಮಾರಕವಾಗಿದೆ. ಉಸಿರಾಟದ ತೊಂದರೆಯ ಜೊತೆಗೆ, ಇದು ಜ್ವರ, ಸ್ನಾಯು ನೋವು, ತಲೆನೋವು, ಜ್ವರ, ತಲೆತಿರುಗುವಿಕೆ ಮತ್ತು ವಾಕರಿಕೆ ನಿಫಾದ ಪ್ರಮುಖ ಲಕ್ಷಣ.