ಜಮ್ಮು ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಪಹಲ್ಗಾಮ್ ದಾಳಿಗೂ ಮುನ್ನ ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾಹ ವಾರ್ಷಿಕೋತ್ಸವ!
ವಿಐಪಿ ಭದ್ರತೆ ಹೊಂದಿದ್ದ ಕಾರ್ಯಕ್ರಮದ ಸುತ್ತ ಅನುಮಾನಗಳ ಹುತ್ತ

ನಿಶಿಕಾಂತ್ ದುಬೆ | ANI
ಹೊಸದಿಲ್ಲಿ: ಇತ್ತೀಚೆಗೆ ಗುಲ್ಮಾರ್ಗ್ ನಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆಯೋಜಿಸಿದ್ದ ಅದ್ದೂರಿ ಕೌಟುಂಬಿಕ ಕಾರ್ಯಕ್ರಮವು ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಬಿಜೆಪಿಯ ಆಂತರಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಿಶಿಕಾಂತ್ ದುಬೆಯ 25ನೇ ವಿವಾಹೋತ್ಸವದ ಅಂಗವಾಗಿ ಭಾರಿ ಬಿಗಿ ಭದ್ರತೆಯೊಂದಿಗೆ ನಡೆದಿದ್ದ ಈ ಕಾರ್ಯಕ್ರಮದಲ್ಲಿ ಎಲ್ಲ ಪಕ್ಷಗಳ ರಾಜಕಾರಣಿಗಳು ಪಾಲ್ಗೊಂಡಿದ್ದರು. ಆದರೆ, ಜಮ್ಮು ಮತ್ತು ಕಾಶ್ಮೀರದಂಥ ಸೂಕ್ಷ್ಮ ಪ್ರದೇಶದಲ್ಲಿ ನಡೆದಿದ್ದ ಈ ಕಾರ್ಯಕ್ರಮದ ಅದ್ದೂರಿತನವು, ಖಾಸಗಿ ಕಾರ್ಯಕ್ರಮವೊಂದಕ್ಕೆ ಒದಗಿಸಲಾಗಿದ್ದ ವಿಐಪಿ ಸುರಕ್ಷತಾ ಶಿಷ್ಟಾಚಾರದ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿವೆ.
ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಇಡೀ ಕಾಶ್ಮೀರ ಪ್ರಾಂತ್ಯವನ್ನೇ ನಡುಗಿಸಿದ್ದು, ಭದ್ರತಾ ಕ್ರಮಗಳ ಬಗ್ಗೆ ಆಳವಾದ ಮರುಪರಿಶೀಲನೆಗೆ ಕಾರಣವಾಗಿದೆ. ಗುಲ್ಮಾರ್ಗ್ ಕಾರ್ಯಕ್ರಮ ಹಾಗೂ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಯಾವುದೇ ನೇರ ಸಂಬಂಧ ಕಲ್ಪಿಸಲಾಗಿರದಿದ್ದರೂ, ಗುಲ್ಮಾರ್ಗ್ ನಲ್ಲಿನ ಅದ್ದೂರಿ ಕಾರ್ಯಕ್ರಮ ಹಾಗೂ ಪಹಲ್ಗಾಮ್ ನಲ್ಲಿನ ದುರಂತಮಯ ಭದ್ರತಾ ಲೋಪದ ಕುರಿತು ಬಿಜೆಪಿಯೊಳಗೆ ಕಳವಳ ವ್ಯಕ್ತವಾಗಿದ್ದು, ಕಣಿವೆಯಲ್ಲಿ ವಿಐಪಿಗಳ ಚಲನವಲನಗಳು ಹಾಗೂ ಸಭೆಗಳು ಅಪಾಯದ ಸಾಧ್ಯತೆಗೊಳಗಾಗಿರುವುದರ ಬಗ್ಗೆ ಆತಂಕ ಮನೆ ಮಾಡಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಬಿಜೆಪಿಯು ತನ್ನ ಆಂತರಿಕ ಸಂಘಟನಾತ್ಮಕ ಚುನಾವಣೆಗಳನ್ನು ತಡೆ ಹಿಡಿದಿದೆ. ಈ ನಿರ್ಧಾರಕ್ಕೆ ಪ್ರಗತಿಯಲ್ಲಿರುವ ವ್ಯೂಹಾತ್ಮಕ ಚರ್ಚೆಗಳು ಮಾತ್ರ ಕಾರಣವಾಗಿಲ್ಲ, ಬದಲಿಗೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿನ ಹತ್ಯೆಗಳಿಂದಾಗಿ ರಾಜಕೀಯ ವಾತಾವರಣದ ಮೇಲೆ ಕವಿದಿರುವ ಅಂಧಕಾರವೂ ಕಾರಣ ಎನ್ನಲಾಗಿದೆ. ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದಂಥ ಪ್ರಮುಖ ರಾಜ್ಯಗಳ ಬಿಜೆಪಿ ರಾಜ್ಯಾಧ್ಯಹಕ್ಷ ಹುದ್ದೆಗಾಗಿನ ಚುನಾವಣೆಗಳನ್ನು ಮೊದಲಿಗೆ ಬಿಜೆಪಿಯ ರಾಷ್ಟ್ರೀಯ ಅಧ್ಯೇಕ್ಷರ ಆಯ್ಕೆಗೂ ಮುನ್ನವೇ ನಿಗದಿಗೊಳಿಸಲಾಗಿತ್ತು. ಆದರೆ, ಈ ಇಡೀ ಸಂಘಟನಾತ್ಮಕ ಪುನಾರಚನೆಯು ಮತ್ತಷ್ಟು ವಿಳಂಬಕ್ಕೆ ಗುರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಎಪ್ರಿಲ್ 24ರಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದಂತೆ ಭದ್ರತಾ ಲೋಪಗಳಾಗಿರುವ ಸಾಧ್ಯದತೆ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿಕೊಂಡಿದ್ದರು. “ಒಂದು ವೇಳೆ ಏನೂ ತಪ್ಪಾಗಿರದಿದ್ದರೆ, ನಾವೇಕೆ ಇಲ್ಲಿ ಸಭೆ ಸೇರುತ್ತಿದ್ದೆವು?” ಎಂದು ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರನ್ನುದ್ದೇಶಿಸಿ ಅಮಿತ್ ಶಾ ಪ್ರಶ್ನಿಸಿದರು ಎಂದು ವರದಿಯಾಗಿದೆ. ಆ ಮೂಲಕ, ಈ ಲೋಪಗಳು ಎಲ್ಲಿ ಸಂಭವಿಸಿದವು ಹಾಗೂ ಹೇಗೆ ಸಂಭವಿಸಿದವು ಎಂಬ ಕುರಿತು ತನಿಖೆ ನಡೆಯಬೇಕಾದ ಅಗತ್ಯವಿದೆ ಎಂಬ ಪ್ರತಿಪಾದನೆಯನ್ನು ಅವರು ಅನುಮೋದಿಸಿದರು ಎಂದು ಹೇಳಲಾಗಿದೆ.
ಇದೇ ಸಭೆಯಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಇನ್ನಿತರ ವಿರೋಧ ಪಕ್ಷಗಳ ನಾಯಕರು ಭದ್ರತಾ ಪಡೆಗಳ ನಿಯೋಜನೆ ಹಾಗೂ ಗುಪ್ತಚರ ಸಮನ್ವಯತೆಯಲ್ಲಿ ಆಗಿರುವ ವೈಫಲ್ಯದ ಕುರಿತು ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಭಯೋತ್ಪಾದಕ ದಾಳಿ ನಡೆದ ಸ್ಥಳದಲ್ಲಿ ಯಾಕೆ ಯಾವುದೇ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಿರಲಿಲ್ಲ ಎಂದು ಪ್ರಶ್ನಿಸಿದ ವಿರೋಧ ಪಕ್ಷಗಳ ನಾಯಕರು, ಭಾರಿ ಅಪಾಯವಿರುವ ವಲಯಗಳಲ್ಲಿ ಶಿಷ್ಟಾಚಾರ ಉಲ್ಲಂಘಿಸಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.
ಈ ಪ್ರಶ್ನೆಗಳಿಗೆ ಪ್ರತಿಯಾಗಿ, ಭಯೋತ್ಪಾದಕ ದಾಳಿ ನಡೆದ ಅನಂತನಾಗ್ ಜಿಲ್ಲೆಯಲ್ಲಿನ ಬೈಸರಣ್ ಪ್ರದೇಶವನ್ನು ತೆರೆಯುವಾಗ, ಸ್ಥಳೀಯ ಪ್ರಾಧಿಕಾರಗಳು ಭದ್ರತಾ ಪಡೆಗಳಿಗೆ ಮಾಹಿತಿ ನೀಡುವಲ್ಲಿ ವಿಫಲಗೊಂಡಿವೆ ಎಂದು ಸರಕಾರ ಸಮರ್ಥಿಸಿಕೊಂಡಿತು. ಸಾಂಪ್ರದಾಯಿಕವಾಗಿ, ಜೂನ್ ತಿಂಗಳಲ್ಲಿ ಅಮರನಾಥ ಯಾತ್ರೆ ಆರಂಭವಾಗುವವರೆಗೆ ಈ ಪ್ರದೇಶವು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುವುದಿಲ್ಲ. ಹೀಗಿದ್ದೂ, ಮುಂಚಿತವಾಗಿಯೇ ಈ ಪ್ರದೇಶದೊಳಕ್ಕೆ ಪ್ರವೇಶ ನೀಡಿರುವುದು ಹಾಗೂ ಸಮನ್ವಯತೆಯ ಕೊರತೆ ಉಂಟಾಗಿರುವುದರ ಕುರಿತು ಸಭೆಯಲ್ಲಿ ಗಂಭೀರ ಪ್ರಶ್ನೆಗಳನ್ನು ಕೇಳಲಾಯಿತು ಎನ್ನಲಾಗಿದೆ.
ಸೌಜನ್ಯ: financialexpress.com