ʼಚೀಟೀಶ್ ಕುಮಾರ್ʼ: ವಕ್ಫ್ ತಿದ್ದುಪಡಿ ಮಸೂದೆ ಬೆಂಬಲಿಸಿದ ನಿತೀಶ್ ಕುಮಾರ್ ಆರೆಸ್ಸೆಸ್ ಸಮವಸ್ತ್ರದಲ್ಲಿರುವ ಫೋಟೊ ಹಂಚಿಕೊಂಡ ಆರ್ಜೆಡಿ!

Photo credit: X/@RJDforIndia
ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರತಿಪಕ್ಷ ಆರ್ಜೆಡಿ ʼಚೀಟೀಶ್ ಕುಮಾರ್ʼ ಎಂದು ಕರೆದಿದೆ. ಸಾಮಾಜಿಕ ಮಾಧ್ಯಮಗಳ ಪೋಸ್ಟ್ನಲ್ಲಿ ಅವರನ್ನು ಆರೆಸ್ಸೆಸ್ ಕಾರ್ಯಕರ್ತ ಎಂಬಂತೆ ಬಿಂಬಿಸಲಾಗಿದೆ.
ಎನ್ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಯು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಗೆ ಬೆಂಬಲವನ್ನು ಸೂಚಿಸಿತ್ತು. ಇದರಿಂದಾಗಿ ಆರ್ಜೆಡಿ, ನಿತೀಶ್ ಕುಮಾರ್ ಅವರ ಜಾತ್ಯಾತೀತತೆಯನ್ನು ಪ್ರಶ್ನಿಸಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಸ್ಲಿಂ ಸಮುದಾಯಕ್ಕೆ ಮೋಸಗೈದಿದ್ದಾರೆ ಎಂದು ʼಚೀಟೀಶ್ ಕುಮಾರ್ʼ ಎಂದು ಕರೆದಿದೆ.
ವಕ್ಫ್ ತಿದ್ದುಪಡಿ ಮಸೂದೆಗೆ ಜೆಡಿಯು ಪಕ್ಷ ನೀಡಿದ ಬೆಂಬಲದಿಂದ ಅಸಮಾಧಾನಗೊಂಡಿರುವ ಪಕ್ಷದ ಇಬ್ಬರು ಹಿರಿಯ ನಾಯಕರಾದ ಮುಹಮ್ಮದ್ ಕಾಸಿಂ ಅನ್ಸಾರಿ ಹಾಗೂ ಮುಹಮ್ಮದ್ ನವಾಝ್ ಮಲಿಕ್ ಗುರುವಾರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಆರ್ಜೆಡಿ ಹಂಚಿಕೊಂಡಿರುವ ಫೋಟೋಶಾಪ್ ಚಿತ್ರದಲ್ಲಿ ನಿತೀಶ್ ಕುಮಾರ್ ಆರೆಸ್ಸೆಸ್ ಸಮವಸ್ತ್ರ ಬಿಳಿ ಶರ್ಟ್ ಮತ್ತು ಖಾಕಿ ಚಡ್ಡಿ ಧರಿಸಿರುವುದನ್ನು ತೋರಿಸುತ್ತದೆ. ಪೋಟೊಗೆ ಆರೆಸ್ಸೆಸ್ ಪ್ರಮಾಣಿ ʼಚೀಟೀಶ್ ಕುಮಾರ್ʼ ಎಂದು ಶೀರ್ಷಿಕೆಯನ್ನು ನೀಡಲಾಗಿದೆ.
ಈ ಪೋಸ್ಟ್ ಮೂಲಕ ಆರ್ಜೆಡಿ ನಿತೀಶ್ ಕುಮಾರ್ ಅವರ ಜಾತ್ಯತೀತ ಬಗ್ಗೆ ಪ್ರಶ್ನಿಸಿದೆ ಮತ್ತು ಮಸೂದೆಗೆ ಬೆಂಬಲಿಸುವ ಮೂಲಕ ನಿತೀಶ್ ಕುಮಾರ್ ಆರೆಸ್ಸೆಸ್ ಸಿದ್ದಾಂತದಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಿಕೊಂಡಿದೆ.