ಜ.28ರಂದು ಬಿಜೆಪಿ ಬೆಂಬಲದೊಂದಿಗೆ ಮತ್ತೆ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ?
ನಿತೀಶ್ ಕುಮಾರ್ (PTI)
ಹೊಸದಿಲ್ಲಿ: ಜೆಡಿ(ಯು) ಅಧ್ಯಕ್ಷ ನಿತೀಶ್ ಕುಮಾರ್ ಅವರು ಜ.28ರಂದು ಬಿಜೆಪಿ ಬೆಂಬಲದೊಂದಿಗೆ ಬಿಹಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು indiatoday.in ವರದಿ ಮಾಡಿದೆ.
ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳೊಂದಿಗೆ ಹೆಚ್ಚುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ನಿತೀಶ್ ಕುಮಾರ್ ಅವರು ಬಿಜೆಪಿ ಜೊತೆ ಮತ್ತೆ ಕೈಜೋಡಿಸುವ ಸಾಧ್ಯತೆಯಿದೆಯೆಂಬ ಊಹಾಪೋಹಗಳು ದಟ್ಟವಾಗಿವೆ.
ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧುರಿ ಮತ್ತು ಸುಶೀಲ್ ಮೋದಿ, ವಿಜಯ್ ಕುಮಾರ್ ಸಿನ್ಹಾ ಸಹಿತ ರಾಜ್ಯದ ಹಿರಿಯ ಬಿಜೆಪಿ ನಾಯಕರೊಂದಿಗೆ ದಿಲ್ಲಿಯಲ್ಲಿ ಸಭೆ ನಡೆಸಿರುವುದು ನಿತೀಶ್ ಕುಮಾರ್ ಅವರು ಮತ್ತೆ ಬಿಜೆಪಿ ಜೊತೆ ಮೈತ್ರಿ ಸಾಧಿಸಲಿದ್ದಾರೆಂಬ ಸುದ್ದಿ ದಟ್ಟವಾಗಿ ಹರಡಲು ಕಾರಣವಾಗಿದೆ.
ಇಂಡಿಯಾ ಮೈತ್ರಿಕೂಟದಲ್ಲಿ ಪ್ರಮುಖ ಹುದ್ದೆ ದೊರೆಯದೇ ಇರುವ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅಸಮಾಧಾನಗೊಂಡಿದ್ದಾರೆಂದು ತಿಳಿಯಲಾಗಿದೆ.
ಬಿಹಾರದಲ್ಲಿ 2020 ವಿಧಾನಸಭಾ ಚುನಾವಣೆಯಲ್ಲಿ ಜೆಡಿ(ಯು) ನಿರ್ವಹಣೆ ನಿರೀಕ್ಷಿತ ಮಟ್ಟದಲ್ಲಿಲ್ಲದೇ ಇದ್ದರಿಂದ ಬಿಜೆಪಿ ಪ್ರಾಬಲ್ಯ ಮೆರೆಯಲು ಯತ್ನಿಸಲು ಆರಂಭಿಸುತ್ತಿದ್ದಂತೆಯೇ ನಿತೀಶ್ ಅವರು ವಿಪಕ್ಷ ಮೈತ್ರಿಕೂಟದತ್ತ ವಾಲಿದ್ದರು.