ಇಂಡಿಯಾ ಮೈತ್ರಿಕೂಟದ ಸಂಚಾಲಕ ಹುದ್ದೆ ನಿರಾಕರಿಸಿದ ನಿತೀಶ್ ಕುಮಾರ್
ಪಾಟ್ನಾ: ಇಂಡಿಯಾ ಮೈತ್ರಿಕೂಟದ ಸಂಚಾಲಕ ಹುದ್ದೆ ಸ್ವೀಕರಿಸುವಂತೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮನವೊಲಿಸುವಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ಹಿರಿಯ ಮುಖಂಡರು ವಿಫಲರಾಗಿದ್ದಾರೆ.
ಶನಿವಾರ ನಡೆದ ವಿರೋಧ ಪಕ್ಷಗಳ ಮುಖಂಡರ ವರ್ಚುವಲ್ ಸಭೆಯಲ್ಲಿ ಈ ಪ್ರಸ್ತಾವವನ್ನು ನಿತೀಶ್ ಕುಮಾರ್ ನಿರಾಕರಿಸಿದರು ಎನ್ನಲಾಗಿದೆ.
ವರ್ಚುವಲ್ ಸಭೆ ಆರಂಭವಾದ ತಕ್ಷಣ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿಯವರು ನಿತೀಶ್ ಹೆಸರನ್ನು ಪ್ರಸ್ತಾಪಿಸಿ, ಇಂಡಿಯಾ ಮೈತ್ರಿಕೂಟದ ಸಂಚಾಲಕರಾಗುವಂತೆ ಕೋರಿದರು. ಸೋನಿಯಾ, ರಾಹುಲ್, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ.ರಾಜಾ, ಎಸ್ ಸಿಪಿಯ ಶರದ್ ಪವಾರ್ ಹಾಗೂ ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಈ ನಡೆಯನ್ನು ಬೆಂಬಲಿಸಿದರು. ಆದರೆ ಜೆಡಿಯು ಮುಖಂಡ ಇದನ್ನು ನಿರಾಕರಿಸಿ, ಈ ಹುದ್ದೆಯನ್ನು ಲಾಲೂ ಪ್ರಸಾದ್ ಯಾದವ್ ಗೆ ನೀಡುವಂತೆ ಕೋರಿದರು.
"ಇಂಡಿಯಾ ಮೈತ್ರಿಕೂಟದ ಸಂಚಾಲಕ ಹುದ್ದೆಗೆ ನಿತೀಶ್ ಅವರ ಹೆಸರು ಪ್ರಸ್ತಾವವಾಗಿದ್ದು ನಿಜ; ಈ ಬಗ್ಗೆ ಚರ್ಚೆಗಳು ನಡೆದವು" ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಬಿಹಾರ ಸಚಿವ ಸಂಜಯ್ ಕುಮಾರ್ ಝಾ ಸ್ಪಷ್ಟಪಡಿಸಿದ್ದಾರೆ.
ಮುಖ್ಯವಾಗಿ ಎರಡು ಕಾರಣಕ್ಕೆ ನಿತೀಶ್ ಈ ಪ್ರಸ್ತಾವವನ್ನು ನಿರಾಕರಿಸಿದ್ದಾರೆ. ಮೊದಲನೆಯದು ಇಂಡಿಯಾ ಮೈತ್ರಿಕೂಟ ರಚನೆಯಾಗಿ ಆರೇಳು ತಿಂಗಳ ಬಳಿಕ ಈ ಹುದ್ದೆ ನೀಡಲಾಗಿದೆ. ಎರಡನೆಯದಾಗಿ ಇಂಡಿಯಾ ಕೂಟದ ಅಧ್ಯಕ್ಷರಾಗಿ ಖರ್ಗೆಯವರನ್ನು ನೇಮಕ ಮಾಡುವಾಗಲೇ ನಿತೀಶ್ ಅವರಿಗೂ ಹುದ್ದೆ ನೀಡಬೇಕಿತ್ತು ಎನ್ನುವುದು ಜೆಡಿಯು ಮುಖಂಡರ ಅಭಿಮತ.