600 ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮುಳುವಾದ ಎನ್ಎಂಸಿ ಕ್ರಮ
Photo: Freepik
ಚೆನ್ನೈ: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಪ್ರವೇಶ ಪಡೆದ ಆರೋಪದಲ್ಲಿ 600ಕ್ಕೂ ಹೆಚ್ಚು ವಿದೈಆರ್ಥಿಗಳ ಪ್ರವೇಶವನ್ನು ಅಮಾನ್ಯಗೊಳಿಸಿದ ಕಾರಣದಿಂದ ಪ್ರಸಕ್ತ ವರ್ಷ ವೈದ್ಯಕೀಯ ಶಿಕ್ಷಣ ಪದವಿ ಸೀಟು ಪಡೆದಿದ್ದ ಈ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಹಲವು ರಾಜ್ಯಗಳಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯ ಅವ್ಯವಸ್ಥೆಯಿಂದಾಗಿ ದೇಶಾದ್ಯಂತ 2000ಕ್ಕೂ ಹೆಚ್ಚು ಎಂಬಿಬಿಎಸ್ ಸೀಟುಗಳು ವ್ಯರ್ಥವಾಗಲಿವೆ.
1500ಕ್ಕೂ ಹೆಚ್ಚು ಎಂಬಿಬಿಎಸ್ ಸೀಟುಗಳನ್ನು ಅವಧಿ ಮೀರಿ ಭರ್ತಿ ಮಾಡಿಕೊಳ್ಳಲಾಗಿದ್ದು, ಉಳಿದ ಸೀಟುಗಳು ಸುಪ್ರೀಂಕೋರ್ಟ್ ನಿಗದಿಪಡಿಸಿದ ನಿಗದಿತ ಗಡುವಾದ ಸೆಪ್ಟೆಂಬರ್ 30ರ ಬಳಿಕವೂ ಖಾಲಿ ಉಳಿದ ಸೀಟುಗಳಾಗಿವೆ. ಅಂತೆಯೇ 600 ವಿದ್ಯಾರ್ಥಿಗಳ ಪ್ರವೇಶವನ್ನು ಎನ್ಎಂಸಿ ಅಮಾನ್ಯಗೊಳಿಸಿರುವುದರಿಂದ ಇವರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ನಿಯಮದ ಪ್ರಕಾರ ಕೇಂದ್ರೀಯ ಅಥವಾ ರಾಜ್ಯ ಏಜೆನ್ಸಿಗಳು ಮಾತ್ರ ಕೌನ್ಸಿಲಿಂಗ್ ನಡೆಸಲು ಅವಕಾಶವಿದ್ದು, ಈ ವಿದ್ಯಾರ್ಥಿಗಳಿಗೆ ಕಾಲೇಜುಗಳು ನೇರವಾಗಿ ಪ್ರವೇಶ ನೀಡಿದ್ದವು.
ಸುಪ್ರೀಂಕೋರ್ಟ್ ವಿಧಿಸಿರುವ ನಿಗದಿತ ಗಡುವನ್ನು ವಿಸ್ತರಿಸಲಿದ್ದರೆ, ಈ ಸೀಟುಗಳು ಈ ಕೋರ್ಸ್ ಅವಧಿಗೆ ಖಾಲಿ ಉಳಿಯಲಿವೆ. ಸೆಪ್ಟೆಂಬರ್ 30ರ ಬಳಿಕ ಕೇಂದ್ರ ಹಾಗೂ ರಾಜ್ಯ ಏಝೆನ್ಸಿಗಳು ಭರ್ತಿ ಮಾಡಿರುವ ಸೀಟುಗಳ ವಿದ್ಯಾರ್ಥಿಗಳನ್ನು ತಕ್ಷಣ ಹೊರ ಕಳುಹಿಸುವಂತೆ ವೈದ್ಯಕೀಯ ಪದವಿ ಶಿಕ್ಷಣ ಮಂಡಳಿಯ ನಿರ್ದೇಶಕ ಶಂಭು ಶರಣ್ ಕುಮಾರ್ ಎರಡು ಪುಟಗಳ ಅಧಿಸೂಚನೆ ಹೊರಡಿಸಿದ್ದಾರೆ.
ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಇತರ ಹಕ್ಕುದಾರರಿಗೆ 2016ರಲ್ಲಿ ಸುಪ್ರೀಂಕೋರ್ಟ್ ವೇಳಾಪಟ್ಟಿಯನ್ನು ಮಾನ್ಯ ಮಾಡಿದ್ದು, ಕಟಾಫ್ ದಿನಾಂಕವನ್ನು ವಿಸ್ತರಿಸಲು ನ್ಯಾಯಯುತ ಕಾರಣಗಳು ಇಲ್ಲದಿದ್ದಲ್ಲಿ ಈ ಸೀಟುಗಳು ಖಾಲಿ ಇವೆ ಎಂದು 2019ರಲ್ಲಿ ಸುಪ್ರೀಂಕೋರ್ಟ್ ಮುನರುಚ್ಚರಿಸಿದೆ. ಈ ಗಡುವಿನ ಬಗ್ಗೆ ಎನ್ಎಂಸಿ ಜುಲೈ 27ರಂದು ಎಚ್ಚರಿಕೆ ನೀಡಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.