ಮಹಾ ವಿಕಾಸ್ ಅಘಾಡಿ ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ: ಶರದ್ ಪವಾರ್
ಬಾರಾಮತಿ: ಸೋದರಳಿಯ ಹಾಗೂ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಪುಣೆಯಲ್ಲಿ ಭೇಟಿಯಾದ ಬಗ್ಗೆ ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಯಲ್ಲಿ ಯಾವುದೇ ಗೊಂದಲವಿಲ್ಲ ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ಅಧ್ಯಕ್ಷ ಶರದ್ ಪವಾರ್ ಸೋಮವಾರ ಸ್ಪಷ್ಟಪಡಿಸಿದ್ದಾರೆ.
"ಎಂವಿಎ ಒಗ್ಗಟ್ಟಾಗಿದೆ ಹಾಗೂ ನಾವು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ವಿರೋಧ ಪಕ್ಷಗಳ ಒಕ್ಕೂಟ INDIAದ ಮುಂದಿನ ಸಭೆಯನ್ನು ಯಶಸ್ವಿಯಾಗಿ ಆಯೋಜಿಸುತ್ತೇವೆ" ಎಂದು ಪವಾರ್ ಬಾರಾಮತಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಜುಲೈ 2 ರಂದು ಏಕನಾಥ್ ಶಿಂಧೆ ನೇತೃತ್ವದ ಸರಕಾರಕ್ಕೆ ಅಜಿತ್ ಪವಾರ್ ಸೇರಿದ ನಂತರ 82 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ ಮೊದಲ ಬಾರಿ ತವರುಪಟ್ಟಣ ಬಾರಾಮತಿಗೆ ಭೇಟಿ ನೀಡಿದರು.
ಚಿಕ್ಕಪ್ಪ ಹಾಗೂ ಸೋದರಳಿಯ ನಡುವಿನ ಇಂತಹ ಸಭೆಗಳ ಕುರಿತಾಗಿ ರಾಜಕೀಯ ವಲಯಗಳಲ್ಲಿಉಂಟಾಗಿರುವ ಗೊಂದಲವನ್ನು ಸರಿಪಡಿಸುವಂತೆ ಎನ್ಸಿಪಿ ಮುಖ್ಯಸ್ಥರನ್ನು ಎಂವಿಎ ಘಟಕಗಳಾದ ಕಾಂಗ್ರೆಸ್ ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಕೇಳಿಕೊಂಡಿದ್ದವು.
"MVA ಪಾಲುದಾರರಲ್ಲಿ ಯಾವುದೇ ಗೊಂದಲವಿಲ್ಲ. ನಾವೆಲ್ಲರೂ ಒಟ್ಟಿಗೆ ಇದ್ದೇವೆ ಮತ್ತು ಆಗಸ್ಟ್ 31 ರಂದು ಮುಂಬೈನಲ್ಲಿ INDIA ಸಭೆಯನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತೇವೆ" ಎಂದು ಪವಾರ್ ಹೇಳಿದರು.
ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳುವ ಮೂಲಕ ಹೆಚ್ಚಿನ ಗೊಂದಲವನ್ನು ಸೃಷ್ಟಿಸಬೇಡಿ ಎಂದು ಪವಾರ್ ಮಾಧ್ಯಮಗಳಿಗೆ ಕೇಳಿಕೊಂಡರು.
"ನಾನು, ಉದ್ಧವ್ ಠಾಕ್ರೆ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮುಂಬೈನಲ್ಲಿ INDIA ಸಭೆಯನ್ನು ಆಯೋಜಿಸುವ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇನೆ" ಎಂದು ಪವಾರ್ ಹೇಳಿದರು. INDIA ಸಭೆ ಐಷಾರಾಮಿ ಹೋಟೆಲ್ ನಲ್ಲಿ ನಡೆಯಲಿದೆ.