ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ನಿಷೇಧಿಸುವ ಕುರಿತು ಅಮಿತ್ ಶಾ ಹೇಳಿದ್ದೇನು?
ಕೇಂದ್ರ ಗೃಹ ಸಚಿವ ಅಮಿತ್ ಶಾ (Photo: PTI)
ಹೈದರಾಬಾದ್: ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮೇಲೆ ನಿಷೇಧ ಹೇರುವ ಕುರಿತು ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
ಹೈದರಾಬಾದ್ ನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಹಲಾಲ್ ಉತ್ಪನ್ನಗಳ ಮೇಲೆ ನಿಷೇಧ ಹೇರುವ ಕುರಿತು ಕೇಂದ್ರ ಸರ್ಕಾರ ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ” ಎಂದು ಹೇಳಿದ್ದಾರೆ..
ನವೆಂಬರ್ 30ರಂದು ಮತದಾನ ನಡೆಯಲಿರುವ ತೆಲಂಗಾಣ ರಾಜ್ಯದಲ್ಲಿ ಚುನಾವಣಾ ಪ್ರಚಾರದಲ್ಲಿರುವ ಅಮಿತ್ ಶಾ, ಕಳೆದ ಒಂದು ದಶಕದಲ್ಲಿ ಸ್ಪರ್ಧೆಯಲ್ಲಿರುವ ಎಲ್ಲ ಪಕ್ಷಗಳ ಸಾಧನೆಯನ್ನು ಪರಿಗಣಿಸಿ ಮತದಾನ ಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
“ನಿಮ್ಮ (ತೆಲಂಗಾಣದ ಜನರು) ಮತ ಕೇವಲ ಶಾಸಕ ಅಥವಾ ಸರ್ಕಾರದ ಹಣೆಬರಹವನ್ನು ಮಾತ್ರ ನಿರ್ಧರಿಸುವುದಿಲ್ಲ. ಬದಲಿಗೆ, ತೆಲಂಗಾಣ ಹಾಗೂ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ನೀವು ಪ್ರತಿ ಪಕ್ಷದ ಸಾಧನೆಯನ್ನು ವಿಶ್ಲೇಷಿಸಿದ ನಂತರ ಮತ ಚಲಾಯಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. ನೀವು ಎಲ್ಲ ಪಕ್ಷಗಳ ವಿಶ್ಲೇಷಣೆ ಮಾಡಿದ ನಂತರ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಮತ ಚಲಾಯಿಸಲಿದ್ದೀರಿ ಎಂಬ ವಿಶ್ವಾಸ ನನಗಿದೆ” ಎಂದು ಸೊಮಾಜಿಗುಡದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.