ವೈದ್ಯರ ನಿರ್ಲಕ್ಷಕ್ಕೆ ಇನ್ನು ಕ್ರಿಮಿನಲ್ ಶಿಕ್ಷೆಯಿಲ್ಲ!
ನೂತನ ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ, ಶಿಕ್ಷೆ ಮಾಫಿ ಎಂದ ಕೇಂದ್ರ ಗೃಹ ಸಚಿವ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತೀಯ ದಂಡ ಸಂಹಿತೆಯ ಸ್ಥಾನವನ್ನು ವಹಿಸಿಕೊಳ್ಳಲಿರುವ ಭಾರತೀಯ ನ್ಯಾಯ ಸಂಹಿತೆಯು ರೋಗಿಯ ಸಾವಿಗೆ ಕಾರಣವಾಗುವ ವೈದ್ಯರ ವೈದ್ಯಕೀಯ ನಿರ್ಲಕ್ಷತೆಯನ್ನು ಮಾಫಿ ಮಾಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಲೋಕಸಭೆಯಲ್ಲಿ ಘೋಷಿಸಿದ್ದಾರೆ.
‘‘ಈ ಕ್ರಿಮಿನಲ್ ನಿರ್ಲಕ್ಷ್ಯದಿಂದ ವೈದ್ಯರಿಗೆ ವಿನಾಯಿತಿ ನೀಡುವ ತಿದ್ದುಪಡಿಯನ್ನು ನಾನು ತರುತ್ತೇನೆ’’ ಎಂದು ಶಾ ಹೇಳಿದರು. ಈ ವಿಷಯದ ಬಗ್ಗೆ ಗಮನ ಹರಿಸುವಂತೆ ಭಾರತೀಯ ವೈದ್ಯಕೀಯ ಸಂಘವು ನನ್ನ ಸಚಿವಾಲಯಕ್ಕೆ ಮನವಿ ಮಾಡಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ನುಡಿದರು.
ಪ್ರಸ್ತುತ, ಭಾರತೀಯ ದಂಡ ಸಂಹಿತೆ (ಇಂಡಿಯನ್ ಪೆನಾಲ್ ಕೋಡ್)ಯ 304ಎ ವಿಧಿಯು ಸಾವಿಗೆ ಕಾರಣವಾಗುವ ವೈದ್ಯಕೀಯ ನಿರ್ಲಕ್ಷ್ಯವನ್ನು ನಿಭಾಯಿಸುತ್ತಿದೆ. ಈ ವಿಧಿಯಡಿಯಲ್ಲಿ ಮೊಕದ್ದಮೆ ಎದುರಿಸುವವರು ಎರಡು ವರ್ಷಗಳವರೆಗಿನ ಜೈಲುವಾಸ ಅನುಭವಿಸುತ್ತಾರೆ ಅಥವಾ ದಂಡ ಪಾವತಿಸುತ್ತಾರೆ ಅಥವಾ ಎರಡಕ್ಕೂ ಒಳಗಾಗುತ್ತಾರೆ.
ಪ್ರಮುಖ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಬಹುತೇಕ ಪ್ರತಿಪಕ್ಷ ಸಂಸದರ ಅನುಪಸ್ಥಿತಿಯಲ್ಲಿ ಮಂಗಳವಾರ ಅಂಗೀಕರಿಸಲಾಗಿದೆ. ಪ್ರತಿಪಕ್ಷ ಸಂಸದರನ್ನು ಚಳಿಗಾಲದ ಅಧಿವೇಶನದ ಉಳಿಕೆ ಅವಧಿಗೆ ಅಮಾನತುಗೊಳಿಸಲಾಗಿದೆ. ಸಂಸತ್ನಲ್ಲಿ ನಡೆದ ಭಾರೀ ಭದ್ರತಾಲೋಪಕ್ಕೆ ಸಂಬಂಧಿಸಿ ಸರಕಾರಕ್ಕೆ ಪ್ರಶ್ನೆಗಳನ್ನು ಕೇಳಿರುವುದಕ್ಕಾಗಿ 143 ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿದೆ.
ಭಾರತೀಯ ನ್ಯಾಯ ಸಂಹಿತೆಯನ್ನು ಹೊರತುಪಡಿಸಿ, ಅಂಗೀಕಾರಗೊಂಡಿರುವ ಇತರ ಎರಡು ಮಸೂದೆಗಳೆಂದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಇದು ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸ್ಥಾನದಲ್ಲಿ ಬರುತ್ತದೆ) ಮತ್ತು ಭಾರತೀಯ ಸಾಕ್ಷ್ಯ ಮಸೂದೆ (ಇದು ಎವಿಡೆನ್ಸ್ ಕಾಯ್ದೆಯ ಸ್ಥಾನದಲ್ಲಿ ಬರುತ್ತದೆ).