ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳ ನಿರ್ವಹಣೆಗೆ ಮುಸ್ಲಿಮೇತರರ ನೇಮಕ ಇಲ್ಲ: ಅಮಿತ್ ಶಾ
"ಮುಸ್ಲಿಮರ ಧಾರ್ಮಿಕ ಆಚರಣೆಯ ಬಗ್ಗೆ ವಕ್ಫ್ ಮಸೂದೆಯು ಮಧ್ಯಪ್ರವೇಶಿಸುವುದಿಲ್ಲ"

ಅಮಿತ್ ಶಾ | PC : PTI
ಹೊಸದಿಲ್ಲಿ: ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳ ನಿರ್ವಹಣೆಗೆ ಮುಸ್ಲಿಮೇತರನ್ನು ನೇಮಿಸುವಂತಹ ಯಾವುದೇ ಕಾನೂನುಗಳನ್ನು ವಕ್ಫ್ ತಿದ್ದುಪಡಿ ವಿಧೇಯಕ 2025ರಲ್ಲಿ ಅಳವಡಿಸಲಾಗಿಲ್ಲವೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.
ವಕ್ಫ್ ತಿದ್ದುಪಡಿ ವಿಧೇಯಕದ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಕ್ಫ್ ಮಂಡಳಿ ಹಾಗೂ ವಕ್ಫ್ ನಿಗಮದಲ್ಲಿ ಮುಸ್ಲಿಮೇತರ ಸದಸ್ಯರನ್ನು ಸೇರ್ಪಡೆಗೊಳಿಸಲಾಗುವುದು. ಆದರೆ ಅವರು ವಕ್ಫ್ ಕಾಯ್ದೆಯಡಿ ದೇಣಿಗೆಯಾಗಿ ನೀಡಿದ ಆಸ್ತಿ ಆಡಳಿತದ ನಿರ್ವಹಣೆಯನ್ನು ಮಾತ್ರ ನೋಡಿಕೊಳ್ಳಲಿದ್ದಾರೆಂದು ಸ್ಪಷ್ಟಪಡಿಸಿದ್ದಾರೆ.
ವಕ್ಫ್ ಕಾಯ್ದೆ ಹಾಗೂ ವಕ್ಫ್ ನಿಗಮವು 1995ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ವಕ್ಫ್ ನಿಗಮ ಹಾಗೂ ಮಂಡಳಿಯಲ್ಲಿ ಮುಸ್ಲಿಮೇತರರ ಸೇರ್ಪಡೆಯು, ವಕ್ಫ್ ಮೇಲಿನ ಹಸ್ತಕ್ಷೇಪವೆಂದು ಬಣ್ಣಿಸಲಾಗುತ್ತಿದೆ. ಮೊದಲನೆಯದಾಗಿ ಯಾವುದೇ ಮುಸ್ಲಿಮೇತರನು ವಕ್ಫ್ ವಿಷಯದಲ್ಲಿ ಒಳಗೊಳ್ಳುವುದಿಲ್ಲವೆಂದನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಧಾರ್ಮಿಕ ಸ್ವಾತಂತ್ರ್ಯಗಳ ನಿರ್ವಹಣೆಯಲ್ಲಿ ಯಾವುದೇ ಮುಸ್ಲಿಮೇತರನನ್ನು ಸೇರ್ಪಡೆಗೊಳಿಸುವ ಕಾನೂನು ಈ ಮಸೂದೆಯಲ್ಲಿಲ್ಲ. ನಮಗದು ಬೇಕಿಲ್ಲ ಕೂಡಾ. ಈ ಕಾಯ್ದೆಯು ಮುಸ್ಲಿಮರ ಧಾರ್ಮಿಕ ಆಚರಣೆಗೆ ಹಸ್ತಕ್ಷೇಪ ನಡೆಸುತ್ತಿದೆ ಮತ್ತು ಮುಸ್ಲಿಮರು ದಾನ ಮಾಡಿದ ಆಸ್ತಿಯಲ್ಲಿ ಹಸ್ತಕ್ಷೇಪ ನಡೆಸಲಾಗುತ್ತಿದೆಯೆಂಬ ದೊಡ್ಡದೊಂದು ತಪ್ಪುಗ್ರಹಿಕೆಯಿದೆ. ತಮ್ಮ ಮತಬ್ಯಾಂಕ್ಗಾಗಿ ಅಲ್ಪಸಂಖ್ಯಾತರಲ್ಲಿ ಭೀತಿಯನ್ನು ಸೃಷ್ಟಿಸಲು ಪ್ರತಿಪಕ್ಷಗಳು ಈ ತಪ್ಪುಗ್ರಹಿಕೆಯನ್ನು ಹರಡಲಾಗುತ್ತಿವೆ’’ ಎಂದವರು ಆಪಾದಿಸಿದರು.
‘‘ಮುಸ್ಲಿಮರ ಧಾರ್ಮಿಕ ಆಚರಣೆಯ ಬಗ್ಗೆ ವಕ್ಫ್ ಮಸೂದೆಯು ಮಧ್ಯಪ್ರವೇಶಿಸುವುದಿಲ್ಲ. ಪ್ರತಿಪಕ್ಷಗಳು ವೋಟ್ಬ್ಯಾಂಕ್ ರಾಜಕೀಯವಾಡುತ್ತಿವೆ. ನೀವಾಡುವ ಮಿಥ್ಯೆಗಳಿಂದಾಗಿ ನೀವು ದೇಶವನ್ನು ಒಡೆಯುತ್ತಿದ್ದೀರಿ’’ ಎಂದು ಅಮಿತ್ಶಾ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
ವಕ್ಫ್ ಬೋರ್ಡ್ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಹತ್ತಿಕ್ಕಲೆಂದೇ ಈ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ. 2013ರಲ್ಲಿ ತುಷ್ಟೀಕರಣಕ್ಕಾಗಿ ವಕ್ಫ್ ಕಾನೂನನ್ನು ರೂಪಿಸಲಾಗಿತ್ತು. ಒಂದು ವೇಳೆ ಹಾಗೆ ಮಾಡದೆ ಇರುತ್ತಿದ್ದಲ್ಲಿ ಈ ವಿಧೇಯಕದ ಅವಶ್ಯಕತೆ ಇರುತ್ತಿರಲಿಲ್ಲ. ವಕ್ಫ್ ನಿಗಮವು ಧಾರ್ಮಿಕ ಸಂಸ್ಥೆಯಲ್ಲ ಅದೊಂದು ಆಡಳಿತ ಸಂಸ್ಥೆಯಾಗಿದೆ’’ ಎಂದವರು ಹೇಳಿದ್ದಾರೆ.
ವಕ್ಫ್ (ತಿದ್ದುಪಡಿ) ಮಸೂದೆಯು ಮುಸ್ಲಿಮರ ಧಾರ್ಮಿಕ ವಿಷಯಗಳಲ್ಲಿ ಹಾಗೂ ಮುಸ್ಲಿಮರು ದಾನವಾಗಿ ನೀಡಿದ ಆಸ್ತಿಗಳಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲವೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪುನರುಚ್ಚರಿಸಿದರು.
ವಕ್ಫ್ ಮಸೂದೆಯ ಪ್ರಮುಖ ತಿದ್ದುಪಡಿಗಳು:
►ನೂತನ ತಿದ್ದುಪಡಿ ಮಸೂದೆಯು ಜಿಲ್ಲಾಧಿಕಾರಿ ಸಮಕ್ಷಮದಲ್ಲಿ ಕಂದಾಯ ಕಾನೂನಿನಡಿ ವಕ್ಫ್ ಆಸ್ತಿಯನ್ನು ಗುರುತಿಸಿ, ಸರ್ವೆ ಕಾರ್ಯ ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ
►ಕೇಂದ್ರ ವಕ್ಫ್ ಮಂಡಳಿಯಲ್ಲಿ ಇಬ್ಬರು ಮುಸ್ಲಿಮೇತರರು ಹಾಗೂ ಇಬ್ಬರು ಮುಸ್ಲಿಂ ಮಹಿಳೆಯರು ಇರಬೇಕೆಂದು ಸೂಚಿಸಲಾಗಿದೆ.
►ಈ ಮೊದಲು ವಕ್ಫ್ ಆಸ್ತಿ ವಿವಾದಗಳಿಗೆ ಸಂಬಂಧಿಸಿ ವಕ್ಫ್ ನ್ಯಾಯ ಮಂಡಳಿ ತೀರ್ಮಾನವೇ ಅಂತಿಮವಾಗಿತ್ತು. ಆದರೆ ತಿದ್ದುಪಡಿಗೊಂಡ ಕಾಯ್ದೆಯಲ್ಲಿ ವಕ್ಫ್ ನ್ಯಾಯಮಂಡಳಿ ಆದೇಶವನ್ನು ಪ್ರಶ್ನಿಸಿ 90 ದಿನಗಳೊಳಗೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
►ತಿದ್ದುಪಡಿಗೊಂಡ ಮಸೂದೆಯಲ್ಲಿ ವಕ್ಫ್ ನೋಂದಣಿ, ಲೆಕ್ಕಪರಿಶೋಧನೆ ಹಾಗೂ ಆಸ್ತಿಗಳ ನಿರ್ವಹಣೆಯಲ್ಲಿ ಕೇಂದ್ರದ ಪಾತ್ರವನ್ನು ಅಧಿಕಗೊಳಿಸಲಾಗಿದೆ.
►1995ರ ವಕ್ಫ್ ಮಸೂದೆ ಪ್ರಕಾರ ಸರಕಾರದ ವಶದಲ್ಲಿದ್ದರೂ ವಕ್ಫ್ ಆಸ್ತಿಯೆಂದೇ ಘೋಷಿಸಬೇಕಿತ್ತು. ಆದರೆ 2024ರಲ್ಲಿ ಸರಕಾರದ ವಶದಲ್ಲಿರುವ ವಕ್ಫ್ ಆಸ್ತಿ ಕುರಿತ ವಿವಾದವನ್ನು ಜಿಲ್ಲಾಧಿಕಾರಿ ಪರಿಹರಿಸಬೇಕಾಗುತ್ತದೆ.
ಸರಕಾರದ ಸಮರ್ಥನೆ ಏನು?:
ವಕ್ಫ್ ಕಾಯ್ದೆಗೆ ತಿದ್ದುಪಡಿಯಿಂದಾಗಿ ವಕ್ಫ್ ಆಸ್ತಿಗಳ ನಿರ್ವಹಣೆ, ಲೆಕ್ಕಪರಿಶೋಧನೆಯಲ್ಲಿ ಪಾರದರ್ಶಕತೆ ಇರಲಿದೆ. ಇದರಿಂದ ಹಣದ ಸೋರಿಕೆ ಕಡಿಮೆಯಾಗಲಿದ್ದು, ಬಡವರ ಕಲ್ಯಾಣಕ್ಕೆ ಅದನ್ನು ಬಳಸಬಹುದಾಗಿದೆ ಎಂದು ಎಂದು ಸರಕಾರ ಹೇಳಿಕೊಂಡಿದೆ.
ವಕ್ಫ್ ತಿದ್ದುಪಡಿ ಮಸೂದೆಗೆ ಏಕೀಕೃತ ವಕ್ಫ್ ನಿರ್ವಹಣೆ,ದಕ್ಷತೆ ಮತ್ತು ಅಭಿವೃದ್ಧಿ ಮಸೂದೆ 2024 ಎಂದು ಮರುನಾಮಕರಣ ಮಾಡಲಾಗಿದೆ. ಈ ಮಸೂದೆಯಿಂದ ವಕ್ಫ್ ಆಸ್ತಿಗಳ ಆಡಳಿತ ಹಾಗೂ ನಿರ್ವಹಣೆ ಸುಲಲಿತವಾಗಲಿದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ.