ಮುಸ್ಲಿಂ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿ ನೀಡಲಾಗುತ್ತಿಲ್ಲ : ಅಲಿಘರ್ ಮುಸ್ಲಿಂ ವಿವಿ ಸ್ಪಷ್ಟನೆ
PC : PTI
ಲಕ್ನೋ : ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಪ್ರವೇಶ ಮತ್ತು ನೇಮಕಾತಿಯಲ್ಲಿ ಧರ್ಮದ ಆಧಾರದ ಮೇಲೆ ಯಾವುದೇ ಮೀಸಲಾತಿಯನ್ನು ನೀಡಲಾಗುತ್ತಿಲ್ಲ ಎಂದು ವಿವಿ ಸ್ಪಷ್ಟನೆ ನೀಡಿದೆ.
ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ಸ್ಥಾನಮಾನದ ಕುರಿತು ಹೊಸ ಪೀಠ ನಿರ್ಧರಿಸಲಿದೆ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ಹೇಳಿತ್ತು. ಸುಪ್ರೀಂ ಕೋರ್ಟ್ ನ ಇತ್ತೀಚಿನ ತೀರ್ಪಿನ ನಂತರ ಕೆಲವು ಮಾಧ್ಯಮಗಳು ವರದಿ ಮಾಡಿದಂತೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು ಕೋರ್ಸ್ ಗಳ ಪ್ರವೇಶದಲ್ಲಿ ಮತ್ತು ಉದ್ಯೋಗದ ನೇಮಕಾತಿಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿ ನೀಡುತ್ತಿಲ್ಲ ಎಂದು ಎಎಂಯು ಸಾರ್ವಜನಿಕ ಸಂಪರ್ಕ ಕಚೇರಿಯ ಅಧಿಕಾರಿ ಪ್ರೊ ಮೊಹಮ್ಮದ್ ಅಸಿಮ್ ಸಿದ್ದಿಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಪ್ರವೇಶ ಮತ್ತು ಉದ್ಯೋಗ ನೇಮಕಾತಿಯಲ್ಲಿ ಮುಸ್ಲಿಮರಿಗೆ ಸೀಟುಗಳನ್ನು ಕಾಯ್ದಿರಿಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂಬ ಹೇಳಿಕೆಯನ್ನು ಎಎಂಯು ಅಧಿಕಾರಿಗಳು ನಿರಾಕರಿಸಿದ್ದಾರೆ. ವಿಶ್ವವಿದ್ಯಾನಿಲಯದಿಂದ ನಡೆಸಲ್ಪಡುವ ಶಾಲೆಗಳಿಂದ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ AMU ಆಂತರಿಕ ಕೋಟಾ ವ್ಯವಸ್ಥೆಯನ್ನು ಹೊಂದಿದೆ. ಈ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯಲು ಪ್ರಯತ್ನಿಸಿದಾಗ ಅವರನ್ನು ಆಂತರಿಕ ವಿದ್ಯಾರ್ಥಿಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ಅವರ ಧರ್ಮವನ್ನು ಲೆಕ್ಕಿಸದೆ 50% ಸೀಟುಗಳನ್ನು ಅವರಿಗೆ ಕಾಯ್ದಿರಿಸಲಾಗಿದೆ. AMUನಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಸೀಟುಗಳನ್ನು ಮೀಸಲಿಟ್ಟಿರುವ ಬಗೆಗಿನ ವರದಿಗಳು ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತದ್ದಾಗಿದೆ ಎಂದು ಸಿದ್ದಿಕಿ ಹೇಳಿದ್ದಾರೆ.