ಪಶ್ಚಿಮ ಬಂಗಾಳ: ಚುನಾವಣೆ ದಿನ ಮಹಿಳಾ ಅಭ್ಯರ್ಥಿಯ ನಗ್ನ ಮೆರವಣಿಗೆ ನಡೆಸಲಾಗಿತ್ತು ಎಂಬ ಬಿಜೆಪಿ ಆರೋಪವನ್ನು ನಿರಾಕರಿಸಿದ ಡಿಜಿಪಿ
ಕೊಲ್ಕತ್ತಾ: ಪಶ್ಚಿಮ ಬಂಗಾಳ ಸ್ಥಳೀಯಾಡಳಿತ ಚುನಾವಣೆ ವೇಳೆ ತನ್ನ ಒಬ್ಬ ಅಭ್ಯರ್ಥಿಯ ನಗ್ನ ಮೆರವಣಿಗೆ ನಡೆಸಲಾಗಿತ್ತು ಎಂದು ಬಿಜೆಪಿ ಮಾಡಿರುವ ಆರೋಪವನ್ನು ರಾಜ್ಯದ ಡಿಜಿಪಿ ಮನೋಜ್ ಮಾಲವಿಯಾ ನಿರಾಕರಿಸಿದ್ದಾರೆ. ಈ ಸಂಬಂಧ ದೂರಿನ ತನಿಖೆ ನಡೆಸಿದಾಗ ಚುನಾವಣೆ ದಿನ ಅಂತಹ ಯಾವುದೇ ಘಟನೆ ಪಂಚ್ಲಾದಲ್ಲಿ ನಡೆದಿಲ್ಲ ಎಂದು ಅವರು ಹೇಳಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಂತ ಮಜೂಮ್ದಾರ್ ಮತ್ತು ಇತರ ಲೋಕಸಭಾ ಸದಸ್ಯರು ಆರೋಪ ಹೊರಿಸಿದ್ದರಲ್ಲದೆ ಹೌರಾ ಜಿಲ್ಲೆಯ ಪಂಚ್ಲಾ ಎಂಬಲ್ಲಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಕ್ಕಾಗಿ ಮಹಿಳೆಯೊಬ್ಬರನ್ನು ನಗ್ನಗೊಳಿಸಿ ಮೆರವಣಿವೆ ನಡೆಸಲಾಗಿತ್ತು ಎಂದಿದ್ದರು.
ಪಂಚ್ಲಾದಲ್ಲಿನ ಬೂತ್ ಒಂದರಿಂದ ಮಹಿಳೆಯೊಬ್ಬರನ್ನು ಬಲವಂತವಾಗಿ ಹೊರಗೆಳೆಯಲಾಯಿತು ಮತ್ತು ಆಕೆಯ ಬಟ್ಟೆಗಳು ಹರಿದಿತ್ತು ಎಂದು ಜುಲೈ 13ರಂದು ಹೌರಾ ಎಸ್‌ಪಿಗೆ ಇಮೇಲ್ ಮೂಲಕ ದೂರು ಬಂದಿತ್ತು ಎಂದು ಡಿಜಿಪಿ ಹೇಳಿದ್ದಾರೆ.
ಚುನಾವಣೆ ನಡೆದ ದಿನ ವ್ಯಾಪಕ ಭದ್ರತಾ ಏರ್ಪಾಟು ಮಾಡಲಾಗಿತ್ತು ಹಾಗೂ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ತಿಳಿದು ಬಂದಿತ್ತು. ಸಂತ್ರಸ್ತೆಯೆಂದು ತಿಳಿಯಲಾದ ಮಹಿಳೆಯಿಂದ ಮಾಹಿತಿ ಕೋರಲಾಗಿದ್ದರೂ ಆಕೆ ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ ಯಾ ಕರೆಗೆ ಸ್ಪಂದಿಸಿಲ್ಲ ಎಂದು ಡಿಜಿಪಿ ಹೇಳಿದ್ದಾರೆ.
ಇತ್ತೀಚೆಗೆ ಸ್ಥಳಕ್ಕೆ ಬಿಜೆಪಿಯ ಸತ್ಯಶೋಧನಾ ತಂಡವೂ ಭೇಟಿ ನೀಡಿತ್ತೆನ್ನಲಾಗಿದ್ದು ಅವರಿಗೂ ಯಾವುದೇ ಸುಳಿವು ದೊರಕಿಲ್ಲವೆಂದು ತಿಳಿಯಲಾಗಿದೆ. ತನಿಖೆ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.