ಮಕ್ಕಳಿಗೆ ಆಹಾರ ಆರ್ಡರ್ ಮಾಡೋದಕ್ಕೆ ಅನುಮತಿಸೋ ಬದಲು ಅವರು ತಾಯಿ ಸಿದ್ಧಪಡಿಸಿದ ಆಹಾರ ಸೇವಿಸುವಂತೆ ಮಾಡಿ: ಕೇರಳ ಹೈಕೋರ್ಟ್ ಸಲಹೆ
ಕೇರಳ ಹೈಕೋರ್ಟ್ (PTI)
ತಿರುವನಂತಪುರಂ: ಮೊಬೈಲ್ನಲ್ಲಿ ಅಶ್ಲೀಲ ವೀಡಿಯೋವನ್ನು ರಸ್ತೆಬದಿಯಲ್ಲಿ ವೀಕ್ಷಿಸಿದ್ದಕ್ಕೆ ಬಂಧಿಸಲ್ಪಟ್ಟಿದ್ದ ವ್ಯಕ್ತಿಯೊಬ್ಬನ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸಿ ಮಂಗಳವಾರ ಆದೇಶ ಹೊರಡಿಸಿದ ಕೇರಳ ಹೈಕೋರ್ಟ್, ಅದೇ ಸಮಯ ಹೆತ್ತವರಿಗೆ ಒಂದು ಸಲಹೆಯನ್ನೂ ನೀಡಿದೆ. “ಮಕ್ಕಳು ಸದಾ ಮೊಬೈಲಿನಲ್ಲಿ ಮುಳುಗಿರುವುದನ್ನು ತಪ್ಪಿಸಿ ಅವರು ಹೊರಗೆ ಆಟವಾಡುವಂತೆ ಮಾಡಿ ಮತ್ತು ಸ್ವಿಗ್ಗಿ, ಝೊಮ್ಯಾಟೋ ಮೂಲಕ ಆಹಾರ ಆರ್ಡರ್ ಮಾಡಲು ಅವರಿಗೆ ಅನುಮತಿಸುವ ಬದಲು ತಾಯಿ ಸಿದ್ಧಪಡಿಸಿದ ಆಹಾರ ತಿನ್ನಲು ಪ್ರೋತ್ಸಾಹಿಸಿ ಎಂದು ಹೇಳಿದೆ.
“ಮಕ್ಕಳು ಮೈದಾನದಲ್ಲಿ ಆಟವಾಡಲಿ, ನಂತರ ಮನೆಗೆ ವಾಪಸಾಗಿ ತಾಯಿ ಸಿದ್ಧಪಡಿಸಿದ ರುಚಿಕರ ಆಹಾರ ಸೇವಿಸಲಿ,” ಎಂದು ನ್ಯಾಯಾಲಯ ಹೇಳಿದೆ.
ಈ ನಿರ್ದಿಷ್ಟ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 292 ದಾಖಲಿಸಲು ಸಾಧ್ಯವಿಲ್ಲ, ಒಬ್ಬನೇ ಅಶ್ಲೀಲ ವೀಡಿಯೋವನ್ನು ಅದನ್ನು ಇತರರಿಗೆ ತೋರಿಸದೆ ಅಥವಾ ಶೇರ್ ಮಾಡದೆ ವೀಕ್ಷಿಸುವುದು ಅಪರಾಧವಲ್ಲ ಎಂದು ನ್ಯಾಯಾಲಯ ಹೇಳಿದೆ.
ಮಕ್ಕಳ ಕೈಗೆ ಮೊಬೈಲ್ ಫೋನ್ ನೀಡುವುದರಿಂದ ಉಂಟಾಗುವ ಅಪಾಯಗಳ ಬಗ್ಗೆಯೂ ನ್ಯಾಯಾಲಯ ಎಚ್ಚರಿಕೆ ನೀಡಿತಲ್ಲದೆ ಇಂಟರ್ನೆಟ್ ಸಂಪರ್ಕದಿಂದ ಅಶ್ಲೀಲ ವಿಷಯಗಳು ಮಕ್ಕಳ ಕೈಗೆ ಬಲು ಬೇಗೆ ಸಿಗುತ್ತವೆ ಎಂದು ಎಚ್ಚರಿಸಿದೆ.