ಈಶಾನ್ಯ ಭಾರತ: ಮಳೆಯ ಆರ್ಭಟಕ್ಕೆ ಒಂಬತ್ತು ಜೀವಹಾನಿ
ಗುವಾಹತಿ/ ದಿಬ್ರೂಗಢ: ಈಶಾನ್ಯ ಭಾರತದಲ್ಲಿ ಕುಂಭದ್ರೋಣ ಮಳೆಯಿಂದಾಗಿ ಹಲವೆಡೆ ಭೂಕುಸಿತ ಸಂಭವಿಸಿದ್ದು, ಪ್ರವಾಹ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ. ಮಳೆ ಸಂಬಂಧಿ ಅನಾಹುತಗಳಲ್ಲಿ ಒಟ್ಟು ಒಂಬತ್ತು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಭಾರತದ ಹವಾಮಾನ ಇಲಾಖೆ ಮೇಘಾಲಯ, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ಗಳಲ್ಲಿ ಬುಧವಾರದಿಂದ ಮೂರು ದಿನಗಳ ಅವಧಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ಅಸ್ಸಾಂನ ಎಲ್ಲ 28 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಸಂತ್ರಸ್ತರ ಸಂಖ್ಯೆ 11.34 ಲಕ್ಷಕ್ಕೇರಿದೆ. ಸೋಮವಾರ 19 ಜಿಲ್ಲೆಗಳಲ್ಲಿ 6.44 ಮಂದಿ ಮಾತ್ರ ಸಂತ್ರಸ್ತರಾಗಿದ್ದರು.
ಅಸ್ಸಾಂನಲ್ಲಿ ಪ್ರಸಕ್ತ ಋತುವಿನಲ್ಲಿ ಮಳೆ ಸಂಬಂಧಿ ಅನಾಹುತಗಳಿಂದ ಮೃತಪಟ್ಟವರ ಸಂಖ್ಯೆ 38ಕ್ಕೇರಿದೆ. ಭೀಕರ ಪ್ರವಾಹ ಪರಿಸ್ಥಿತಿಯಿಂದಾಗಿ 1300 ಚದರ ಕಿಲೋಮೀಟರ್ ವಿಸ್ತೀರ್ಣದ ಕಝಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿಧಾಮದಲ್ಲಿ ಪನ್ಬರಿ ಮೀಸಲು ಅರಣ್ಯ ಪ್ರದೇಶದ ಕೆಲ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರದೇಶಗಳು ಮುಳುಗಡೆಯಾಗಿದೆ. ದಿಬ್ರೂ- ಸೈಖೋವಾ ನ್ಯಾಷನಲ್ ಪಾರ್ಕ್ ಶೇಕಡ 80ರಷ್ಟು ಮುಳುಗಿದೆ. ಕಝಿರಂಗ ಪಾರ್ಕ್ ನಲ್ಲಿ ನಾಲ್ಕು ಜಿಂಕೆಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇತರ ಪ್ರಾಣಿಗಳು ಎತ್ತರ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವುದು ಅನಿವಾರ್ಯವಾಗಿದೆ.
ತಿನ್ಸುಕಿಯಾದಲ್ಲಿ ಇಬ್ಬರು ನೀರಿನಲ್ಲಿ ಮುಳುಗಿದ್ದರೆ, ಅಸ್ಸಾಂನ ಧೇಮ್ಜಿಯಲ್ಲಿ ಮತ್ತೊಬ್ಬರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಕಚಾರ್ ನಲ್ಲಿ ಮನೆಯೊಂದರ ಮಣ್ಣಿನ ಗೋಡೆ ಕುಸಿದು ಬಿದ್ದು, ಆರು ತಿಂಗಳ ಮಗು ಮತ್ತು 28 ವರ್ಷ ವಯಸ್ಸಿನ ವ್ಯಕ್ತಿ ಜೀವ ಕಳೆದುಕೊಂಡಿದ್ದಾರೆ. ಮಿಜೋರಾಂನ ಐಜ್ವಾಲ್ ಹೊರವಲಯದಲ್ಲಿ ದಂಪತಿ ಹಾಗೂ ನಾಲ್ಕೂವರೆ ವರ್ಷದ ಮಗು ಭೂಕುಸಿತದ ಅವಶೇಷಗಳಡಿ ಮಣ್ಣುಪಾಲಾಗಿದ್ದಾರೆ.
ನಾಗಾಲ್ಯಾಂಡ್ ನ ಕುಸಾಂಗ್ ಗ್ರಾಮದಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಮಧ್ಯರಾತ್ರಿ ವೇಳೆಗೆ ಅವರ ಶವ ಪತ್ತೆಯಾಗಿದೆ. ಬುಧವಾರದಿಂದ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದ್ದು, ಪ್ರವಾಹ ಪರಿಸ್ಥಿತಿ ಸುಧಾರಿಸಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.