ಮಳೆ ಅಬ್ಬರಕ್ಕೆ ತತ್ತರಿಸಿದ ಉತ್ತರ ಭಾರತ; ಹಲವು ಪ್ರಾಣಹಾನಿ
Photo: PTI
ಹೊಸದಿಲ್ಲಿ: ಕುಂಭದ್ರೋಣ ಮಳೆಯಿಂದಾಗಿ ಉತ್ತರ ಭಾರತ ಅಕ್ಷರಶಃ ತತ್ತರಿಸಿದ್ದು, ಮಳೆ ಸಂಬಂಧಿ ಅನಾಹುತಗಳಿಂದ ಕನಿಷ್ಠ 12 ಮಂದಿ ಜೀವ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ದೆಹಲಿ, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಪಂಜಾಬ್ ಹಾಗೂ ಜಮ್ಮು & ಕಾಶ್ಮೀರದಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ. ಉತ್ತರ ಭಾರತದಾದ್ಯಂತ ಪಾಶ್ಚಿಮಾತ್ಯ ಪ್ರಕ್ಷುಬ್ಧತೆ ಮುಂದುವರಿದಿದ್ದು, ಮುಂದಿನ ಕೆಲ ದಿನಗಳಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.
ದೆಹಲಿಯಲ್ಲಿ ಫ್ಲ್ಯಾಟ್ನ ಸೀಲಿಂಗ್ ಕುಸಿದು ಬಿದ್ದು 58 ವರ್ಷದ ಮಹಿಳೆ ಮೃತಪಟ್ಟಿದ್ದು, ರಾಜಸ್ಥಾನದಲ್ಲಿ ಮಳೆ ಸಂಬಂಧಿ ಅನಾಹುತಗಳಿಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ರವಿವಾರ ನಸುಕಿನಲ್ಲಿ ಮನೆ ಕುಸಿದು ಮಹಿಳೆ ಹಾಗೂ ಆರು ವರ್ಷದ ಬಾಲಕಿ ಜೀವಂತ ಸಮಾಧಿಯಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಇಂಥದ್ದೇ ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪ್ರವಾಹ ನೀರಿನಲ್ಲಿ ಸೈನಿಕರೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ವ್ಯಾಪಕ ಮಳೆ ಹಾಗೂ ಭೂಕುಸಿತದಿಂದಾಗಿ ಸತತ ಮೂರನೇ ದಿನವೂ ಅಮರನಾಥ ಯಾತ್ರೆ ರದ್ದುಪಡಿಸಲಾಗಿದೆ. ಶ್ರೀನಗರ- ಜಮ್ಮು ಹೆದ್ದಾರಿ ಭಾಗಶಃ ಹಾನಿಗೊಂಡಿರುವುದರಿಂದ 3000 ವಾಹನಗಳು ಸಿಕ್ಕಿಹಾಕೊಂಡಿವೆ.
ದಕ್ಷಿಣದ ಕೇರಳ ಹಾಗೂ ಕರ್ನಾಟಕದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕೇರಳದ ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಕ ಮಳೆ ನಿರೀಕ್ಷಿಸಲಾಗಿದೆ. ಹಿಮಾಚಲ ಪ್ರದೇಶದ ಏಳು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕುಲು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಭಾಗಶಃ ಹಾನಿಗೊಂಡಿದ್ದು, ಬಿಯಾಸ್ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.