ಎಲ್ಲ ವ್ಯಾಜ್ಯಗಳೂ ನ್ಯಾಯಾಲಯಕ್ಕೆ ಸೂಕ್ತವಾಗುವುದಿಲ್ಲ; ಪರಿಹಾರಕ್ಕಾಗಿ ರಾಜಿ ಮಾರ್ಗ ಸೂಕ್ತ: ಸಿಜೆಐ ಸಂಜೀವ್ ಖನ್ನಾ

ಸಂಜೀವ್ ಖನ್ನಾ | PC : PTI
ಮುಂಬೈ: ಎಲ್ಲ ವ್ಯಾಜ್ಯಗಳೂ ನ್ಯಾಯಾಲಯಕ್ಕೆ ಹಾಗೂ ದಾವೆಗಳಿಗೆ ಸೂಕ್ತವಾಗುವುದಿಲ್ಲ ಎಂದು ಶನಿವಾರ ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ರಾಜಿ ವಿಧಾನವು ಸೃಜನಶೀಲ ಪರಿಹಾರ ಒದಗಿಸಿ, ಸಂಬಂಧಗಳನ್ನು ಬಲಗೊಳಿಸುವುದರಿಂದ ಅದು ಸೂಕ್ತ ವಿಧಾನವಾಗಿದೆ ಎಂದು ಹೇಳಿದ್ದಾರೆ.
ನಾಗಪುರದಲ್ಲಿ ಆಯೋಜನೆಗೊಂಡಿದ್ದ ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಮೂರನೆ ಘಟಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿ ಪ್ರಕರಣಗಳನ್ನು ಕೇವಲ ಕಾನೂನಿನ ವಿಷಯವನ್ನಾಗಿ ನೋಡದೆ, ಮನುಷ್ಯರ ಆಗಿಹೋಗುಗಳಾಗಿ ನೋಡಬೇಕಿದೆ ಎಂದು ಕರೆ ನೀಡಿದರು.
ಭಾರತೀಯ ಕಾನೂನು ನೆರವು ವ್ಯವಸ್ಥೆಯು ಬಹುಶಃ ಇಡೀ ವಿಶ್ವದಲ್ಲೇ ಸದೃಢವಾಗಿದ್ದು, ಎಲ್ಲ ಪಾಲುದಾರರಿಗೆ ನೆರವನ್ನು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
“ಎಲ್ಲ ವ್ಯಾಜ್ಯಗಳು ನ್ಯಾಯಾಲಯಗಳಿಗೆ, ದಾವೆಗಳಿಗೆ ಅಥವಾ ಮಧ್ಯಸ್ಥಿಕೆಗೆ ಸೂಕ್ತವಾಗುವುದಿಲ್ಲ. ರಾಜಿ ವಿಧಾನವು ವ್ಯಾಜ್ಯ ಪರಿಹಾರಕ್ಕಿಂತ ಹೆಚ್ಚಿನದನ್ನು ಒದಗಿಸುವುದರಿಂದ, ಅದು ಪರಿಹಾರದ ವಿಧಾನವಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಈ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದರಿಂದ, ನಾವು ವ್ಯಾಜ್ಯಗಳನ್ನು ದಕ್ಷವಾಗಿ ಮಾತ್ರ ಪರಿಹರಿಸುವುದಿಲ್ಲ, ಬದಲಿಗೆ ಜನರು ಹಾಗೂ ವ್ಯವಹಾರಗಳ ನಡುವಿನ ಸಂಬಂಧಗಳನ್ನು ಬಲಪಡಿಸಬಹುದಾಗಿದೆ ಎಂದೂ ಅವರು ಹೇಳಿದರು.
ವಕೀಲರು ಸಮಸ್ಯೆಯ ನಿವಾರಕರಾಗಿದ್ದು, ಅವರು ಸಮಸ್ಯೆಯನ್ನು ಕಾನೂನಾತ್ಮಕ ಹಾಗೂ ಮಾನವೀಯ ಆಯಾಮಗಳೆರಡಲ್ಲೂ ಬಗೆಹರಿಸಬಹುದಾದಂತಹ ಸೃಜನಶೀಲ ಪರಿಹಾರಗಳೊಂದಿಗೆ ಮುಂದೆ ಬರಬೇಕು ಎಂದು ಅವರು ಕರೆ ನೀಡಿದರು.