‘ಗಾಂಧಿ’ ಹೆಸರು ಬಿಟ್ಟುಬಿಡಿ: ರಾಹುಲ್ ಗಾಂಧಿಗೆ ಅಸ್ಸಾಂ ಸಿಎಂ ಸಲಹೆ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ (PTI)
ಗುವಾಹಟಿ: “ಗಾಂಧಿ ಕುಟುಂಬ ದೇಶವನ್ನು ಒಡೆಯಲು ಕೆಲಸ ಮಾಡುತ್ತಿದೆ” ಎಂದು ಆರೋಪಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ “ತಮ್ಮ ಗಾಂಧಿ ಹೆಸರನ್ನು ಕೈಬಿಡಬೇಕು” ಎಂದು ಹೇಳಿದ್ದಾರೆ.
ಗಾಂಧಿ ಕುಟುಂಬವು “ನಕಲಿಗಳ ಸರ್ದಾರ್” ಎಂದು ಹೇಳಿದ ಶರ್ಮ, ಈ ಕುಟುಂಬ ಬಹಳಷ್ಟು ಹಗರಣಗಳನ್ನು ನಡೆಸಿದೆ ಎಂದರು.
“ಮೊದಲ ಹಗರಣ ಗಾಂಧಿ ಶೀರ್ಷಿಕೆಯೊಂದಿಗೆ ಆರಂಭಗೊಂಡಿತು. ಪರಿವಾರವಾದ ಮಾತ್ರ ಮಾಡಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಗಾಂಧಿ ಹೆಸರು ಬಿಟ್ಟುಬಿಡುವಂತೆ ರಾಹುಲ್ ಗಾಂಧಿ ಅವರನ್ನು ಕೇಳಿಕೊಳ್ಳುತ್ತೇನೆ,” ಎಂದು ಗುವಾಹಟಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡುತ್ತಾ ಅವರು ಆರೋಪಿಸಿದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ಜಿ20 ಶೃಂಗಸಭೆಯ ನಿರ್ಣಯವನ್ನು ಸ್ವಾಗತಿಸಿದ ಶರ್ಮ “ಮೋದೀಜಿ ಜಾಗತಿಕ ನಾಯಕರ ಜೊತೆ ಮಾತನಾಡುವುದನ್ನು ನೋಡಿದೆ. ಭಾರತ ಈಗ ವಿಶ್ವಗುರು ಆಗಿದೆ ಎಂದು ಅನಿಸುತ್ತದೆ. ಪ್ರಧಾನಿ ನಾರಿಶಕ್ತಿ, ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ,” ಎಂದು ಅವರು ಹೇಳಿದರು.