ಮಣಿಪುರ| ಬಿರೇನ್ ಸಿಂಗ್ ಸರಕಾರದ ಯಾವುದೇ ಸಭೆಯಲ್ಲಿ ಭಾಗವಹಿಸದಂತೆ ಪಕ್ಷದ ಶಾಸಕರಿಗೆ ಎನ್ಪಿಪಿ ಸೂಚನೆ
ಬಿರೇನ್ ಸಿಂಗ್ (Photo: PTI)
ಇಂಫಾಲ: ಬಿರೇನ್ ಸಿಂಗ್ ಸರಕಾರದ ಯಾವುದೇ ಸಭೆಗಳಲ್ಲಿ ಭಾಗವಹಿಸದಂತೆ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ತನ್ನ ಸದಸ್ಯರಿಗೆ ಸೂಚನೆ ನೀಡಿದೆ.
ನ. 17ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಸಿಂಗ್ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿದ್ದಾರೆ ಎಂದು ಗುರುವಾರ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ರಾಜ್ಯಾಧ್ಯಕ್ಷ ಎನ್.ಕಯಿಸೈ ಸಹಿ ಮಾಡಿರುವ ಸಲಹಾ ಪತ್ರದಲ್ಲಿ ಹೇಳಲಾಗಿದೆ.
“ಎಲ್ಲ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಸದಸ್ಯರು ಈ ನಿರ್ಧಾರಕ್ಕೆ ಬದ್ಧವಾಗಿರಬೇಕಾಗುತ್ತದೆ” ಎಂದು ತಮ್ಮ ಪತ್ರದಲ್ಲಿ ಕಯಿಸೈ ಸೂಚಿಸಿದ್ದಾರೆ.
ಈ ವಿಷಯದ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಕ್ಕೂ ಮುನ್ನ ಪಕ್ಷದ ರಾಜ್ಯ ಅಥವಾ ರಾಷ್ಟ್ರೀಯ ಅಧ್ಯಕ್ಷರಿಂದ ಅನುಮತಿ ಪಡೆಯಬೇಕು ಎಂದೂ ಈ ಸಲಹಾ ಪತ್ರದಲ್ಲಿ ಪಕ್ಷದ ಸದಸ್ಯರಿಗೆ ಸೂಚಿಸಲಾಗಿದೆ.
ನವೆಂಬರ್ 18ರಂದು ಮುಖ್ಯಮಂತ್ರಿ ಬಿರೇನ್ ಸಿಂಗ್ ವಿಧಾನಸಭಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಎನ್ಡಿಎ ಸಭೆಯಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಮೂವರು ಶಾಸಕರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಈ ನಿರ್ದೇಶನವನ್ನು ನೀಡಲಾಗಿದೆ.