ಸಂಸತ್ ಭದ್ರತಾ ವೈಫಲ್ಯ: ಆರೋಪಿಗಳು ಪೊಲೀಸರಿಗೆ ಹೇಳಿದ್ದೇನು?
Photo: PTI
ಹೊಸದಿಲ್ಲಿ: ಬುಧವಾರ ಸಂಸತ್ತಿನಲ್ಲಿ ನಡೆದ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳ ಪೈಕಿ ಐದು ಮಂದಿ ಈಗ ಪೊಲೀಸ್ ವಶದಲ್ಲಿದ್ದು ಅವರೆಲ್ಲರೂ ಈ ಯೋಜನೆಯನ್ನು ಕಾರ್ಯಗತಗೊಳಿಸಲು ತಿಂಗಳುಗಳ ಕಾಲ ಯೋಜಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ವಿವಿಧ ವಿಚಾರಗಳ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶ ತಮ್ಮದಾಗಿತ್ತು ಎಂದು ಅವರು ಹೇಳಿದ್ದಾರೆಂದು ತಿಳಿದು ಬಂದಿದೆ.
ನಿರುದ್ಯೋಗ, ರೈತರ ಸಮಸ್ಯೆ, ಮಣಿಪುರ ಹಿಂಸಾಚಾರದಿಂದ ತಾವು ಬೇಸತ್ತಿದ್ದಾಗಿ, ಸಂಸದರು ಈ ವಿಚಾರಗಳ ಕುರಿತು ಚರ್ಚಿಸಬೇಕೆಂಬ ತಮ್ಮ ಬೇಡಿಕೆಯತ್ತ ಗಮನ ಸೆಳೆಯಲು ಬಣ್ಣದ ಹೊಗೆ ಬಳಸಿದ್ದಾಗಿ ಅವರು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಈ ಆರೋಪಿಗಳಿಗೆ ಯಾವುದೇ ಸಂಘಟನೆಯ ಜೊತೆ ನಂಟು ಇದೆಯೇ ಎಂಬ ಕುರಿತು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪೊಲೀಸರು ಬುಧವಾರ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಸಂದರ್ಭ ಒಬ್ಬಾತ “ನಾವು ಯಾವುದೇ ಸಂಘಟನೆಗೆ ಸೇರಿದವರಲ್ಲ. ನಾವು ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳು. ನಮ್ಮಲ್ಲಿ ಕೆಲವರ ಹೆತ್ತವರು ಕಾರ್ಮಿಕರು, ರೈತರು ಹಾಗೂ ಅಂಗಡಿ ಮಾಲೀಕರು. ನಮ್ಮ ದನಿಯನ್ನು ಅದುಮಲು ಯತ್ನಿಸಲಾಗುತ್ತಿದೆ,” ಎಂದು ಹೇಳಿದ್ದ.
ದಿಲ್ಲಿ ಪೊಲೀಸರ ವಿಶೇಷ ಘಟಕ ಈ ಪ್ರಕರಣದ ತನಿಖೆ ನಡೆಸುತ್ತಿದೆ.