ಏಂಜೆಲೊ ಮ್ಯಾಥ್ಯೂಸ್ ನಿದರ್ಶನ ಬಳಸಿಕೊಂಡು ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಲು ಮುಂದಾದ ಒಡಿಶಾ ಸಾರಿಗೆ ಪ್ರಾಧಿಕಾರ
Photo: twitter.com/STAOdisha
ಭುವನೇಶ್ವರ: ಬಾಂಗ್ಲಾದೇಶದ ಎದುರಿನ ಪಂದ್ಯದಲ್ಲಿ ಮುರಿದು ಹೋಗಿದ್ದ ಹೆಲ್ಮೆಟ್ ಧರಿಸಿಕೊಂಡು ಮೈದಾನಕ್ಕೆ ಬಂದು, ಬದಲಿ ಹೆಲ್ಮೆಟ್ ಬರುವಲ್ಲಿ ವಿಳಂಬಗೊಂಡಿದ್ದರಿಂದ ವಿಶ್ವ ಕ್ರಿಕೆಟ್ ಇತಿಹಾಸದಲ್ಲೇ ಟೈಮ್ಡ್ ಔಟ್ ಔಟ್ಗೆ ಗುರಿಯಾಗಿದ್ದ ಶ್ರೀಲಂಕಾ ತಂಡದ ಆಟಗಾರ ಏಂಜೆಲೊ ಮ್ಯಾಥ್ಯೂಸ್ ನಿದರ್ಶನ ಬಳಸಿಕೊಂಡು ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಲು ಒಡಿಶಾ ರಾಜ್ಯ ಸಾರಿಗೆ ಪ್ರಾಧಿಕಾರವು ಮುಂದಾಗಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಒಡಿಶಾ ರಾಜ್ಯ ಸಾರಿಗೆ ಪ್ರಾಧಿಕಾರವು, "ನಿಮ್ಮ ವಿಕೆಟ್ ಅನ್ನು ಚೆಲ್ಲಬೇಡಿ. ಸ್ಥಿರವಾಗಿ ದೀರ್ಘಕಾಲದ ಇನಿಂಗ್ಸ್ ಆಡಿ. ಯಾವಾಗಲೂ ಐಎಸ್ಐ ಪ್ರಮಾಣಿತ ಹೆಲ್ಮೆಟ್ ಅನ್ನೇ ಬಳಸಿ ಮತ್ತು ಪಟ್ಟಿಯನ್ನು ಕಟ್ಟಿಕೊಳ್ಳಿ. ಈ ಕೆಲಸವನ್ನು ಹಿಂಬದಿ ಸವಾರರೂ ಮಾಡುವಂತೆ ಪ್ರೋತ್ಸಾಹಿಸಿ. ಮೈದಾನದಲ್ಲಾಗಲಿ ಅಥವಾ ಮೈದಾನದ ಹೊರಗಾಗಲಿ ಎಂದಿಗೂ ಸುರಕ್ಷತೆಯೇ ಮೊದಲು" ಎಂದು #AngeloMatthews, #CricketWorldCup, #WorldCup2023 ಎಂಬ ಹ್ಯಾಶ್ ಟ್ಯಾಗ್ಗಳನ್ನು ಬಳಸಿ ವಾಹನ ಸವಾರರಿಗೆ ಮನವಿ ಮಾಡಿದೆ.
ಈ ವಿನೂತನ ಜಾಗೃತಿ ಅಭಿಯಾನದ ಪೋಸ್ಟ್ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.