ಈ ವರ್ಷ 7 ಲಕ್ಷ ಭಾರತೀಯ ಪ್ರವಾಸಿಗರನ್ನು ಸ್ವಾಗತಿಸಲು ಒಮಾನ್ ಸಜ್ಜು!
ದಾಖಲೆ ಮುರಿಯುವ ನಿರೀಕ್ಷೆ
PC : abubakarphotography.com
ಮಸ್ಕತ್ : ಪಶ್ಚಿಮ ಏಶ್ಯದ ದೇಶವಾದ ಒಮಾನ್ ಪ್ರವಾಸಿ ತಾಣವಾಗಿ ಜನಪ್ರಿಯತೆ ಗಳಿಸುತ್ತಿರುವುದರಿಂದ, ಈ ವರ್ಷ ಏಳು ಲಕ್ಷ ಭಾರತೀಯ ಪ್ರವಾಸಿಗರನ್ನು ನಿರೀಕ್ಷಿಸುತ್ತಿದೆ. ಆ ಮೂಲಕ ಹಿಂದಿನ ವರ್ಷದ ದಾಖಲೆಯನ್ನು ಮುರಿಯಲು ಸಜ್ಜಾಗಿದೆ ಎಂದು ಒಮಾನ್ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಿಂದ ಅತ್ಯಧಿಕ ಪ್ರವಾಸಿಗರನ್ನು ಹೊಂದಿರುವ ಒಮಾನ್ ಗೆ 2023ರಲ್ಲಿ ದಾಖಲೆಯ ಆರು ಲಕ್ಷ ಭಾರತೀಯ ಪ್ರವಾಸಿಗರು ಭೇಟಿ ನೀಡಿದ್ದರು. ಮನಮೋಹಕ ಬಯಲು ಸೀಮೆಗಳು, ಹಸಿರುಚ್ಛಾದಿತ ಬೆಟ್ಟಗುಡ್ಡಗಳು ಹಾಗೂ ಅರಬ್ಬೀ ಸಮುದ್ರದಗುಂಟ ಇರುವ ರಮಣೀಯ ತೀರಗಳಿಂದ ಪ್ರವಾಸಿಗರ ಪಾಲಿಗೆ ಒಮಾನ್ ನೆಚ್ಚಿನ ಪ್ರವಾಸಿ ತಾಣಗಳ ಪೈಕಿ ಒಂದಾಗಿ ಬದಲಾಗಿದೆ.
ಭವಿಷ್ಯದಲ್ಲಿ ದೇಶದ ಅಭಿವೃದ್ಧಿಗಾಗಿ ಪ್ರವಾಸೋದ್ಯಮವನ್ನು ತಮ್ಮ ಸರಕಾರ ಆದ್ಯತೆಯನ್ನಾಗಿ ಪರಿಗಣಿಸಿದೆ ಎಂದು ಒಮಾನ್ ಪರಂಪರೆ ಮತ್ತು ಪ್ರವಾಸೋದ್ಯಮ ಸಚಿವಾಲಯದ ಓರ್ವ ಅಧಿಕಾರಿ ತಿಳಿಸಿದ್ದಾರೆ.
ಒಮಾನ್ ನಾದ್ಯಂತ ಇರುವ ಏಜಸ್ ಮ್ಯೂಸಿಯಂ, ಮುಸಾಂಡಮ್ ನಲ್ಲಿರುವ ಅತಿ ಉದ್ದನೆಯ ಝಿಪ್ ಲೈನ್, ಜಬಾಲ್ ಅಖ್ದರ್ ನಲ್ಲಿರುವ ನಸೀಮ್ ಅಡ್ವೆಂಚರ್ ಪಾರ್ಕ್ ಹಾಗೂ ಮಸ್ಕತ್ ನಲ್ಲಿರುವ ಒಮಾನ್ ಕನ್ವೆನ್ಷನ್ ಆ್ಯಂಡ್ ಎಕ್ಸಿಬಿಶನ್ ಸೆಂಟರ್ ನಂತಹ ಸ್ಥಳಗಳಿಗೆ ಪ್ರವಾಸಿಗಳನ್ನು ಆಕರ್ಷಿಸಲು ಮೂಲಸೌಕರ್ಯ ಅಭಿವೃದ್ಧಿಗಾಗಿ ಒಮಾನ್ ಬೃಹತ್ ಪ್ರಮಾಣದ ಹೂಡಿಕೆ ಮಾಡಿದೆ.
ಒಮಾನ್ ನಲ್ಲಿ ಪ್ರವಾಸೋದ್ಯಮ ವರ್ಷಪೂರ್ತಿ ತೆರೆದಿದ್ದರೂ, ಒಮಾನ್ ಗೆ ಭೇಟಿ ನೀಡಲು ಅಕ್ಟೋಬರ್ ನಿಂದ ಮಾರ್ಚ್ ವರೆಗಿನ ಅವಧಿ ಹೆಚ್ಚು ಸೂಕ್ತವಾಗಿದೆ.