ಆರೋಗ್ಯ ಯೋಜನೆ ಡಾಟಾಬೇಸ್ ನಲ್ಲಿ ಲೋಪ: ಸಿಎಜಿ ಆಕ್ಷೇಪ
Photo: TOI
ಹೊಸದಿಲ್ಲಿ: ವಿಶ್ವದಲ್ಲೇ ಅತಿದೊಡ್ಡ ಯೋಜನೆ ಎನಿಸಿದ ಸಾರ್ವಜನಿಕ ಆರೋಗ್ಯ ಖಾತರಿ ಯೋಜನೆಯ ಡಾಟಾಬೇಸ್ ನಲ್ಲಿ ಹಲವು ಲೋಪಗಳು ಇದ್ದು, ಇದರಿಂದಾಗಿ ಅನರ್ಹ ಫಲಾನುಭವಿಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಾಗಿ ಬಂದಿದೆ. ಮುಖ್ಯವಾಗಿ ಅಸಮರ್ಪಕ ದೃಢೀಕರಣ ನಿಯಂತ್ರಣ ವ್ಯವಸ್ಥೆಯಿಂದಾಗಿ ವ್ಯತ್ಯಾಸಗಳು ಕಂಡುಬಂದಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ನಡೆಸಿದ ಪರಿಶೋಧನಾ ವರದಿ ಸ್ಪಷ್ಟಪಡಿಸಿದೆ.
ಆಯುಷ್ಮಾನ್ ಭಾರತ್- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಎಎಂಜೆಎವೈ) ಹಲವು ಅಧಿಕೃತವಲ್ಲದ ಹೆಸರು, ಅವಾಸ್ತವಿಕ ಜನ್ಮದಿನಾಂಕ, ಡೂಪ್ಲಿಕೇಟ್ ಆರೋಗ್ಯ ಐಡಿಗಳು ಮತ್ತು ಅಸಹಜ ಕುಟುಂಬ ಗಾತ್ರದ ಮಾಹಿತಿಗಳನ್ನು ಒಳಗೊಂಡಿದೆ ಎಂದು ಮಂಗಳವಾರ ಸಂಸತ್ತಿನಲ್ಲಿ ಮಂಡಿಸಲಾದ ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಸೂಕ್ತವಾದ ದೃಢೀಕರಣ ನಿಯಂತ್ರಣ ವ್ಯವಸ್ಥೆ ಇಲ್ಲದ ಕಾರಣ, ಫಲಾನುಭವಿಗಳ ಡಾಟಾಬೇಸ್ ನಲ್ಲಿ ಲೋಪಗಳು ಕಾಣಿಸಿಕೊಂಡಿವೆ. ತಮಿಳುನಾಡಿನ 36 ಪ್ರಕರಣಗಳಲ್ಲಿ 18 ಆಧಾರ್ ಸಂಖ್ಯೆಗಳು ಎರಡು ಬಾರಿ ನೋಂದಣಿಯಾಗಿವೆ. ಏಳು ಆಧಾರ್ ಸಂಖ್ಯೆಗಳನ್ನು ಉಲ್ಲೇಖಿಸಿ 4751 ನೋಂದಣಿಗಳು ನಡೆದಿವೆ" ಎಂದು ವರದಿ ವಿವರಿಸಿದೆ.
ಒಂದೇ ಅಥವಾ ಅಧಿಕೃತವಲ್ಲದ ಮೊಬೈಲ್ನಂಬರ್ ನ ಮುಂದೆ 11 ರಿಂದ 7,49,820 ಫಲಾನುಭವಿಗಳವರೆಗೆ ಹೆಸರು ನೋಂದಾಯಿಸಿರುವುದು ಫಲಾನುಭವಿ ಗುರುತಿಸುವಿಕೆ ವ್ಯವಸ್ಥೆ (ಬಿಐಎಸ್)ಯಲ್ಲಿ ಕಂಡುಬಂದಿದೆ ಎಂದು ವರದಿ ತಿಳಿಸಿದೆ.
ಉದಾಹರಣೆಗೆ 2018ರಿಂದ 2021ರ ಅವಧಿಯಲ್ಲಿ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯ ದತ್ತಾಂಶವನ್ನು ಬದಿಗಿರಿಸಿ ಕ್ರಮವಾಗಿ 16,865 ಮತ್ತು 335 ಅನರ್ಹ ಫಲಾನುಭವಿಗಳನ್ನು ಜಮ್ಮು & ಕಾಶ್ಮೀರ ಹಾಗೂ ಲಡಾಖ್ ಆರೋಗ್ಯ ಅಧಿಕಾರಿಗಳು ಗುರುತಿಸಿದ್ದಾರೆ ಎಂದು ವರದಿ ಆಕ್ಷೇಪಿಸಿದೆ.