ಲೋಕಸಭೆಯಲ್ಲಿ ʼಒಂದು ರಾಷ್ಟ್ರ, ಒಂದು ಚುನಾವಣೆ ಮಸೂದೆʼ ಮಂಡನೆ ಸಾಧ್ಯತೆ: ಸಂಸದರಿಗೆ ವಿಪ್ ಜಾರಿ ಮಾಡಿದ ಬಿಜೆಪಿ, ಕಾಂಗ್ರೆಸ್
ಲೋಕಸಭೆ | PC : PTI
ಹೊಸದಿಲ್ಲಿ: ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ʼಒಂದು ರಾಷ್ಟ್ರ, ಒಂದು ಚುನಾವಣೆʼ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ತನ್ನ ಸಂಸದರಿಗೆ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ಜಾರಿ ಮಾಡಿದೆ.
ವಿವಾದಿತ ಮಸೂದೆಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಲಿದೆ ಎಂದು ಹೇಳಲಾಗಿದೆ..
ಸದನದಲ್ಲಿಯೇ ಇರುವಂತೆ ಬಿಜೆಪಿಯ ಮಿತ್ರಪಕ್ಷಗಳು ಕೂಡ ತನ್ನ ಎಲ್ಲ ಸಂಸದರಿಗೆ ವಿಪ್ ಜಾರಿ ಮಾಡಿದೆ. ಕೆಲವು "ಪ್ರಮುಖ ಶಾಸಕಾಂಗ ವ್ಯವಹಾರ" ಕುರಿತು ಚರ್ಚಿಸಲು ನಿರ್ಧರಿಸಲಾಗಿರುವುದರಿಂದ ಮಂಗಳವಾರ ಸದನದಲ್ಲಿ ಹಾಜರಿರುವಂತೆ ಶಿವಸೇನೆ ತಮ್ಮ ಪಕ್ಷದ ಸಂಸದರಿಗೆ ವಿಪ್ ನೀಡಿದೆ ಎಂದು ಲೋಕಸಭೆಯಲ್ಲಿ ಶಿವಸೇನೆಯ ಮುಖ್ಯ ಸಚೇತಕ ಶ್ರೀರಂಗ್ ಬಾರ್ನೆ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಕೂಡ ಸಂಸದರಿಗೆ ವಿಪ್ ಜಾರಿ ಮಾಡಿದೆ. ಕಲಾಪಕ್ಕೆ ಸದನದಲ್ಲಿ ಕಡ್ಡಾಯವಾಗಿ ಉಪಸ್ಥಿತರಿರುವಂತೆ ಸಂಸದರಿಗೆ ಸೂಚಿಸಿದೆ.
ಮಂಗಳವಾರದ ಲೋಕಸಭೆಯ ಪಟ್ಟಿ ಮಾಡಲಾದ ಕಾರ್ಯಸೂಚಿಯಲ್ಲಿ ʼಒಂದು ರಾಷ್ಟ್ರ, ಒಂದು ಚುನಾವಣೆʼ ಮಸೂದೆ ಒಳಗೊಂಡಿದ್ದು, ಮಸೂದೆಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ಮೇಘವಾಲ್ ಮಂಡಿಸಲಿದ್ದಾರೆ ಎಂದು ಹೇಳಲಾಗಿದೆ.