‘ಒಂದು ದೇಶ, ಒಂದು ಚುನಾವಣೆ’ ಮಸೂದೆ ಮಂಡನೆಗಾಗಿ ಮತದಾನ: ಮೂರನೇ ಎರಡು ಬಹುಮತ ಪಡೆಯಲು ವಿಫಲ
ಬಿಜೆಪಿಯ 20 ಸಂಸದರು ಗೈರು; ಮಸೂದೆ ವಾಪಸ್ ಪಡೆಯುವಂತೆ ಪ್ರತಿಪಕ್ಷಗಳ ಆಗ್ರಹ
PC : PTI
ಹೊಸದಿಲ್ಲಿ: ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಅನುಮತಿ ನೀಡುವ ‘ಒಂದು ದೇಶ,ಒಂದು ಚುನಾವಣೆ’ ಉಪಕ್ರಮದ ಅಂಗವಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ ರಾಮ ಮೇಘ್ವಾಲ್ ಅವರು ಮಂಗಳವಾರ ಲೋಕಸಭೆಯಲ್ಲಿ ಎರಡು ಮಸೂದೆಗಳನ್ನು ಮಂಡಿಸಿದರು. ಪ್ರತಿಪಕ್ಷಗಳು ಮಸೂದೆಯನ್ನು ಬಲವಾಗಿ ಪ್ರತಿಭಟಿಸಿದವು.
ಮಸೂದೆ ಮಂಡನೆಗೆ ಮುನ್ನ ಪ್ರತಿಪಕ್ಷಗಳು ಮತ ವಿಭಜನೆಯನ್ನು ಕೋರಿದ್ದವು. ಹೀಗಾಗಿ ನೂತನ ಸಂಸತ್ ಕಟ್ಟಡದಲ್ಲಿ ಲೋಕಸಭೆಯಲ್ಲಿ ಪ್ರಥಮ ಬಾರಿಗೆ ವಿದ್ಯುನ್ಮಾನ ಮತದಾನ ವ್ಯವಸ್ಥೆಯನ್ನು ಬಳಸಲಾಯಿತು. ಆದರೆ ಮಸೂದೆಗಳು ಕೆಳಮನೆಯಲ್ಲಿ ಅಗತ್ಯ ಮೂರನೇ ಎರಡರಷ್ಟು ಬಹುಮತವನ್ನು ಗಳಿಸುವಲ್ಲಿ ವಿಫಲಗೊಂಡವು. ಮಸೂದೆಗಳ ಪರವಾಗಿ 269 ಮತ್ತು ವಿರುದ್ಧವಾಗಿ 198 ಮತಗಳು ಚಲಾವಣೆಗೊಂಡವು.
ಎನ್ಡಿಎ ಲೋಕಸಭೆಯಲ್ಲಿ ಸುಮಾರು 293 ಸಂಸದರನ್ನು ಹೊಂದಿದ್ದು. ಮಸೂದೆಯ ಅಂಗೀಕಾರಕ್ಕೆ ಮೂರನೇ ಎರಡರಷ್ಟು, ಅಂದರೆ 361 ಸದಸ್ಯರ ಬೆಂಬಲ ಅಗತ್ಯವಿದೆ. ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವು 235 ಸಂಸದರನ್ನು ಹೊಂದಿದೆ. ಪ್ರಸ್ತುತ ಲೋಕಸಭೆಯು 542 ಸದಸ್ಯರು ಮತ್ತು ಒಂದು ಖಾಲಿ ಸ್ಥಾನವನ್ನು ಹೊಂದಿದೆ.
ಅತ್ತ 243 ಸದಸ್ಯ ಬಲದ ರಾಜ್ಯಸಭೆಯಲ್ಲಿ ಮಸೂದೆಯ ಅಂಗೀಕಾರಕ್ಕೆ 162 ಸದಸ್ಯರ ಬೆಂಬಲ ಅಗತ್ಯವಾಗಿದ್ದು,ಎನ್ಡಿಎ ಸದ್ಯಕ್ಕೆ 122 ಸದಸ್ಯರನ್ನು ಹೊಂದಿದೆ. ಖಾಲಿಯಿರುವ ಸ್ಥಾನಗಳ ಭರ್ತಿಗಾಗಿ ನಡೆಯುತ್ತಿರುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅದರ ಬಲ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.
ಪ್ರತಿಪಕ್ಷಗಳು ಮಸೂದೆಗಳನ್ನು ಒಕ್ಕೂಟವಾದದ ಮೇಲಿನ ದಾಳಿ ಎಂದು ಟೀಕಿಸಿದರೆ,ಮಸೂದೆಯು ಸಂವಿಧಾನಕ್ಕೆ ಅನುಗುಣವಾಗಿದೆ ಎಂದು ಸರಕಾರವು ಪ್ರತಿಪಾದಿಸಿತು.
‘ಒಂದು ದೇಶ,ಒಂದು ಚುನಾವಣೆ’ ಮಸೂದೆಗಳು ಸಂವಿಧಾನಕ್ಕೆ ಅನುಗುಣವಾಗಿವೆ,ಮೂಲ ರಚನೆ ಸಿದ್ಧಾಂತದ ಮೇಲೆ ದಾಳಿ ಮಾಡಬೇಡಿ. ಈ ಮಸೂದೆಗಳಿಗೆ ಆಕ್ಷೇಪಗಳು ರಾಜಕೀಯ ಸ್ವರೂಪದ್ದಾಗಿವೆ ಎಂದು ಮೇಘ್ವಾಲ್ ಹೇಳಿದರು.
ಮಸೂದೆಗಳನ್ನು ತಕ್ಷಣವೇ ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದ ಪ್ರತಿಪಕ್ಷಗಳು ಅವುಗಳನ್ನು ಸಂವಿಧಾನದ ಮೇಲಿನ ದಾಳಿ ಮತ್ತು ‘ಪ್ರಜಾಪ್ರಭುತ್ವವನ್ನು ಹತ್ಯೆಗೈದು ಸರ್ವಾಧಿಕಾರವನ್ನು ತರುವ’ ಪ್ರಯತ್ನ ಎಂದು ಬಣ್ಣಿಸಿದವು.
ಮಸೂದೆಯನ್ನು ವಿರೋಧಿಸಿದ ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿಯವರು,ಇದು ಪ್ರಾದೇಶಿಕ ಪಕ್ಷಗಳನ್ನು ನಿರ್ನಾಮಗೊಳಿಸುತ್ತದೆ. ನಿರ್ದಿಷ್ಟ ಪಕ್ಷವೊಂದಕ್ಕೆ ರಾಜಕೀಯ ಲಾಭಗಳನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಮತ್ತು ಅಧ್ಯಕ್ಷೀಯ ಮಾದರಿಯ ಸರಕಾರಕ್ಕೆ ಮಾರ್ಗವನ್ನು ಸುಗಮಗೊಳಿಸುತ್ತದೆ. ಈ ಮಸೂದೆಯನ್ನು ಕೇವಲ ಸರ್ವೋಚ್ಚ ನಾಯಕನ ಪ್ರತಿಷ್ಠೆಗಾಗಿ ಮಂಡಿಸಲಾಗಿದೆ ಎಂದು ಹೇಳಿದರು.
ಮಸೂದೆಗಳ ವಿರುದ್ಧ ವಾದಿಸಿದ ಕಾಂಗ್ರೆಸ್ ಸಂಸದ ಮನೀಷ ತಿವಾರಿಯವರು, ಸಂವಿಧಾನವು ಸದನದ ತಿದ್ದುಪಡಿ ಅಧಿಕಾರವನ್ನು ಮೀರಿ ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಮೂಲ ರಚನೆ ಸಿದ್ಧಾಂತವು ಹೇಳುತ್ತದೆ. ಒಕ್ಕೂಟವಾದ ಮತ್ತು ನಮ್ಮ ಸಂವಿಧಾನದ ಸ್ವರೂಪ ಈ ಅಗತ್ಯ ವೈಶಿಷ್ಟ್ಯಗಳಾಗಿವೆ. ಆದ್ದರಿಂದ ಕಾನೂನು ಮತ್ತು ನ್ಯಾಯ ಸಚಿವರು ಮಂಡಿಸಿರುವ ಮಸೂದೆಗಳು ಸಂವಿಧಾನದ ಮೂಲ ರಚನೆಯ ಮೇಲಿನ ಸಂಪೂರ್ಣ ದಾಳಿಗಳಾಗಿವೆ ಮತ್ತು ಸದನದ ಶಾಸಕಾಂಗ ಸಾಮರ್ಥ್ಯವನ್ನು ಮೀರಿವೆ ಎಂದು ಹೇಳಿದರು.
ಸಾಂವಿಧಾನಿಕ ತತ್ವಗಳನ್ನು ದುರ್ಬಲಗೊಳಿಸುವ ಶಾಸನವನ್ನು ಮಂಡಿಸಿದ್ದಕ್ಕಾಗಿ ಬಿಜೆಪಿಯನ್ನು ಟೀಕಿಸಿದ ಎಸ್ಪಿ ಸಂಸದ ಧರ್ಮೇಂದ್ರ ಯಾದವ್ ಅವರು,‘ಸಚಿವರು ಮಂಡಿಸಿರುವ ಸಂವಿಧಾನ(129ನೇ ತಿದ್ದುಪಡಿ) ಮಸೂದೆ, 2024ನ್ನು ನಾನು ವಿರೋಧಿಸುತ್ತೇನೆ. ಎರಡು ದಿನಗಳ ಹಿಂದಷ್ಟೇ ಸಂವಿಧಾನವನ್ನು ರಕ್ಷಿಸುವ ಭವ್ಯವಾದ ಪರಂಪರೆಯನ್ನು ಎತ್ತಿ ಹಿಡಿಯಲಾಗಿತ್ತು, ಈಗ ಎರಡೇ ದಿನಗಳಲ್ಲಿ ಸಂವಿಧಾನದ ಮೂಲ ಸ್ಫೂರ್ತಿ ಮತ್ತು ರಚನೆಯನ್ನು ದುರ್ಬಲಗೊಳಿಸಲು ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ. ಇದು ಹೇಗೆ ಎಂದು ನನಗೆ ಅರ್ಥವಾಗುತ್ತಿಲ್ಲ’ ಎಂದು ಹೇಳಿದರು.
‘ಮನೀಷ್ ತಿವಾರಿ ಅವರ ಮಾತನ್ನು ನಾನು ಒಪ್ಪುತ್ತೇನೆ. ಸಂವಿಧಾನವನ್ನು ರೂಪಿಸಿದವರಿಗಿಂತ ಹೆಚ್ಚು ಬಲ್ಲವರು ಆಗಲೂ ಇರಲಿಲ್ಲ,ಈಗ ಈ ಸದನದಲ್ಲಿಯೂ ಇಲ್ಲ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ’ ಎಂದರು.
ಮಸೂದೆಗಳನ್ನು ಮಂಡಿಸಿದ್ದಕ್ಕಾಗಿ ಕೆಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಟಿಎಂಸಿ ಸಂಸದ ಕಲ್ಯಾಣ ಬ್ಯಾನರ್ಜಿಯವರು,ಉದ್ದೇಶಿತ ವಿಧಿ ಸೇರ್ಪಡೆಯು ಪ್ರಸಕ್ತ ಸಂವಿಧಾನಕ್ಕೆ ವ್ಯತಿರಿಕ್ತವಾಗಿದೆ ಎಂದು ಹೇಳಿದರು. ಚುನಾವಣಾ ಸುಧಾರಣೆ ಈ ಉದ್ದೇಶಿತ ತಿದ್ದುಪಡಿಗಳ ಉದ್ದೇಶವಲ್ಲ,ಕೇವಲ ಒಬ್ಬ ವ್ಯಕ್ತಿಯ ಕನಸುಗಳನ್ನು ನನಸಾಗಿಸುವುದು ಇವುಗಳ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಮಸೂದೆಯನ್ನು ವ್ಯಾಪಕ ಸಮಾಲೋಚನೆಗಾಗಿ ಜಂಟಿ ಸಂಸದೀಯ ಸಮಿತಿಗೆ ಸಲ್ಲಿಸಲಾಗುವುದು ಎಂದು ಮೇಘ್ವಾಲ್ ಸದನಕ್ಕೆ ತಿಳಿಸಿದರು.