ಬ್ರಿಜ್ ಭೂಷಣ ವಿರುದ್ಧ ದೋಷಾರೋಪ ಪಟ್ಟಿ | ವಿಜಯದತ್ತ ಒಂದು ಸಣ್ಣ ಹೆಜ್ಜೆ ಎಂದ ಸಾಕ್ಷಿ ಮಲಿಕ್
ಸಾಕ್ಷಿ ಮಲಿಕ್ | PC : PTI
ಹೊಸದಿಲ್ಲಿ : ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬೆದರಿಕೆ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಶನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಆರೋಪ ಪಟ್ಟಿ ದಾಖಲಿಸುವಂತೆ ದಿಲ್ಲಿಯ ನ್ಯಾಯಾಲಯವೊಂದು ಶುಕ್ರವಾರ ನೀಡಿರುವ ಆದೇಶವು ಮಹಿಳಾ ಕುಸ್ತಿಪಟುಗಳು ಹೂಡಿರುವ ಪ್ರಕರಣದಲ್ಲಿ ‘‘ವಿಜಯದತ್ತ ಒಂದು ಸಣ್ಣ ಹೆಜ್ಜೆಯಾಗಿದೆ’’ ಎಂದು ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಬಣ್ಣಿಸಿದ್ದಾರೆ.
ಲೈಂಗಿಕ ಕಿರುಕುಳ, ಮಹಿಳೆಯರ ಗೌರವಕ್ಕೆ ಧಕ್ಕೆ ತರುವುದಕ್ಕಾಗಿ ಬಲಪ್ರಯೋಗ ಮತ್ತು ಕ್ರಿಮಿನಲ್ ಬೆದರಿಕೆಗಳಿಗೆ ಸಂಬಂಧಿಸಿದ ಸೂಕ್ತ ವಿಧಿಗಳಡಿಯಲ್ಲಿ ಬಿಜೆಪಿ ನಾಯಕ ಹಾಗೂ ಉತ್ತರಪ್ರದೇಶದ ಸಂಸದನೂ ಆಗಿರುವ ಸಿಂಗ್ ವಿರುದ್ಧ ಆರೋಪಪಟ್ಟಿ ದಾಖಲಿಸುವಂತೆ ನ್ಯಾಯಾಲಯವು ಆದೇಶ ನೀಡಿದೆ.
ಒಲಿಂಪಿಯನ್ಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ ಪೂನಿಯ ನೇತೃತ್ವದಲ್ಲಿ ಹಲವಾರು ಮಹಿಳಾ ಕುಸ್ತಿಪಟುಗಳು ಹಲವು ತಿಂಗಳುಗಳ ಕಾಲ ಹೊಸದಿಲ್ಲಿಯ ಜಂತರ್ಮಂತರ್ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಪ್ರಕರಣವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗುತ್ತದೆ ಎನ್ನುವುದನ್ನು ತಿಳಿದು ನನಗೆ ಸಂತೋಷವಾಗಿದೆ ಎಂದು ಸಾಕ್ಷಿ ಹೇಳಿದರು.
‘‘ಇದು ಖಂಡಿತವಾಗಿಯೂ ವಿಜಯದತ್ತ ಇಡಲಾಗಿರುವ ಒಂದು ಸಣ್ಣ ಹೆಜ್ಜೆಯಾಗಿದೆ. ಹಲವು ವರ್ಷಗಳಿಂದ ಎಳೆಯ ಮಹಿಳಾ ಕುಸ್ತಿಪಟುಗಳಿಗೆ ನೀಡುತ್ತಾ ಬಂದಿರುವ ಲೈಂಗಿಕ ಕಿರುಕುಳಕ್ಕೆ ಬ್ರಿಜ್ ಭೂಷಣ್ ಸಿಂಗ್ರನ್ನು ಉತ್ತರದಾಯಿಯಾಗಿಸಲಾಗುತ್ತದೆ ಎನ್ನುವಾಗ ಖುಷಿಯಾಗುತ್ತದೆ. ಅಂತಿಮ ನ್ಯಾಯ ಸಿಕ್ಕಿ ಸಿಂಗ್ಗೆ ಶಿಕ್ಷೆಯಾಗುವವರೆಗೆ ನಾವು ಈ ಹೋರಾಟವನ್ನು ಮುಂದುವರಿಸುತ್ತೇವೆ’’ ಎಂದು ಐಎಎನ್ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಾಕ್ಷಿ ಮಲಿಕ್ ಹೇಳಿದರು.