ʼಆನ್ ಲೈನ್ ನಲ್ಲಿ ಅವಧಿ ಮೀರಿದ, ನಕಲಿ ಔಷಧಗಳ ವಿತರಣೆ ಸಾಧ್ಯತೆ ಹೆಚ್ಚಿದೆʼ: ಡಿಎಂಕೆ ರಾಜ್ಯಸಭಾ ಸಂಸದೆ ಕನಿಮೊಳಿ
Photo | PTI
ಹೊಸದಿಲ್ಲಿ: ಆನ್ ಲೈನ್ ಡೋರ್ ಡೆಲಿವರಿ ಕಂಪನಿಗಳ ಅತಿ ವೇಗದ ವಿತರಣಾ ಮಾದರಿಯು ಅವಧಿ ಮೀರಿದ ಅಥವಾ ನಕಲಿ ಔಷಧಗಳನ್ನು ಗ್ರಾಹಕರಿಗೆ ನೀಡುವ ಸಾಧ್ಯತೆಯನ್ನು ಹೆಚ್ಚಿಸಬಹುದು, ಆದ್ದರಿಂದ ಆನ್ ಲೈನ್ ಕಂಪೆನಿಗಳು ಔಷಧ ಪೂರೈಕೆ ಮಾಡುವುದನ್ನು ತಡೆಯಬೇಕು ಎಂದು ಡಿಎಂಕೆ ಸಂಸದೆ ಡಾ. ಕನಿಮೊಳಿ ಎನ್ ವಿಎನ್ ಸೋಮು ಅವರು ಆಗ್ರಹಿಸಿದ್ದಾರೆ.
ರಾಜ್ಯಸಭೆಯ ಶೂನ್ಯ ವೇಳೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಡಾ.ಕನಿಮೊಳಿ ಎನ್ ವಿಎನ್ ಸೋಮು, 10 ನಿಮಿಷಗಳ ಔಷಧಿ ವಿತರಣೆ ಪ್ರಕ್ರಿಯೆಯು ವೈದ್ಯಕೀಯ ಮತ್ತು ಫಾರ್ಮಾ ವಲಯದಲ್ಲಿ ಕೋಲಾಹಲವನ್ನು ಉಂಟುಮಾಡಿದೆ. ಇದನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.
ಸ್ವಿಗ್ಗಿ ಸೇರಿದಂತೆ ಇತರ ಡೋರ್ ಡೆಲಿವರಿ ಕಂಪನಿಗಳು ಔಷಧಿಗಳ ಪೂರೈಕೆ ಮಾಡುತ್ತಿರುವುದು ದುರದೃಷ್ಟಕರವಾಗಿದೆ. ಕ್ಷಿಪ್ರ ವಿತರಣಾ ಮಾದರಿಯು ಭಾರತೀಯ ಔಷಧ ನಿಯಮಗಳನ್ನು ಉಲ್ಲಂಘಿಸುತ್ತದೆ ಮತ್ತು ಸಾರ್ವಜನಿಕರಿಗೆ ಆರೋಗ್ಯ ಮತ್ತು ಸುರಕ್ಷತೆಯ ಅಪಾಯವನ್ನುಂಟುಮಾಡುತ್ತದೆ. ಆದ್ದರಿಂದ ಜನರ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಡಾ.ಕನಿಮೊಳಿ ಎನ್ ವಿಎನ್ ಸೋಮು ಹೇಳಿದ್ದಾರೆ.
ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್(AIOCD) ಈಗಾಗಲೇ Swiggy ದಿನಸಿ ಅಂಗವಾದ Instamart ಮತ್ತು ಇ-ಫಾರ್ಮಸಿ ದೈತ್ಯ PharmEasy ನಡುವಿನ ಸಂಭಾವ್ಯ ಸಹಯೋಗದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದು, ಈ ವೇದಿಕೆಗಳು 10 ನಿಮಿಷಗಳಲ್ಲಿ ಗ್ರಾಹಕರೊಂದಿಗೆ ಯಾವುದೇ ನೇರ ಸಂವಾದವಿಲ್ಲದೆ, ಆನ್ಲೈನ್ ಶಾಪಿಂಗ್ ಮತ್ತು ಚಿಲ್ಲರೆ ಮಳಿಗೆ ಮೂಲಕ ಔಷಧಿಗಳನ್ನು ತಲುಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿರುವುದನ್ನು ಡಾ.ಕನಿಮೊಳಿ ಎನ್ ವಿಎನ್ ಸೋಮು ಸಂಸತ್ತಿನ ಗಮನಕ್ಕೆ ತಂದಿದ್ದಾರೆ