ಮಾತುಕತೆಗಳಿಂದ ಮಾತ್ರ ಜಮ್ಮು-ಕಾಶ್ಮೀರದಲ್ಲಿ ಉಗ್ರವಾದವನ್ನು ಅಂತ್ಯಗೊಳಿಸಲು ಸಾಧ್ಯ: ಫಾರೂಕ್ ಅಬ್ದುಲ್ಲಾ
ಫಾರೂಕ್ ಅಬ್ದುಲ್ಲಾ | Photo: PTI
ಶೀನಗರ: ಬುಧವಾರ ಭಯೋತ್ಪಾದಕರೊಂದಿಗೆ ಗುಂಡಿನ ಕಾಳಗದಲ್ಲಿ ಬಲಿಯಾದ ಡಿಎಸ್ಪಿ ಹುಮಾಯೂನ್ ಭಟ್ ಅವರ ಇಲ್ಲಿಯ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು, ಮಾತುಕತೆಗಳಿಂದ ಮಾತ್ರ ಜಮ್ಮು-ಕಾಶ್ಮೀರದಲ್ಲಿ ಉಗ್ರವಾದವನ್ನು ಅಂತ್ಯಗೊಳಿಸಲು ಸಾಧ್ಯ ಎಂದು ಹೇಳಿದರು.
‘ನಾವು ಹಲವಾರು ವರ್ಷಗಳಿಂದ ಈ ವಿನಾಶಕ್ಕೆ ಸಾಕ್ಷಿಯಾಗಿದ್ದೇವೆ. ಇದರ ಅಂತ್ಯ ನನಗೆ ಕಂಡುಬರುತ್ತಿಲ್ಲ. ರಾಜೌರಿ ಇತ್ಯಾದಿ ಕಡೆಗಳಲ್ಲಿ ಎನ್ಕೌಂಟರ್ಗಳ ಬಗ್ಗೆ ನಾವು ಕೇಳುತ್ತಿರುತ್ತೇವೆ ಮತ್ತು ಉಗ್ರವಾದವನ್ನು ನಿರ್ಮೂಲಿಸಲಾಗಿದೆ ಎಂದು ಸರಕಾರವು ಹೇಳಿಕೊಳ್ಳುತ್ತಿದೆ. ಉಗ್ರವಾದವು ಅಂತ್ಯಗೊಂಡಿದೆಯೇ ?’ ಎಂದು ಅಬ್ದುಲ್ಲಾ ಪ್ರಶ್ನಿಸಿದರು.
ಶಾಂತಿಯ ಮರುಸ್ಥಾಪನೆಗೆ ಮಾರ್ಗವೊಂದನ್ನು ಕಂಡುಕೊಳ್ಳುವವರೆಗೆ ಜಮ್ಮು-ಕಾಶ್ಮೀರದಲ್ಲಿ ಉಗ್ರವಾದವು ಕೊನೆಗೊಳ್ಳುವುದಿಲ್ಲ ಎಂದು ಹೇಳಿದ ಅವರು,ಹೋರಾಟವು ಶಾಂತಿಯನ್ನು ತರುವುದಿಲ್ಲ,ಆದರೆ ಮಾತುಕತೆಗಳಿಂದ ಅದು ಸಾಧ್ಯವಿದೆ. ಇದಕ್ಕೆ ಉಕ್ರೇನ್ ಒಂದು ಉದಾಹರಣೆಯಾಗಿದೆ.
ಯುದ್ಧದಿಂದಾಗಿ ಶಾಂತಿಯು ನಾಶಗೊಂಡಿದೆ. ಅಲ್ಲಿಯೂ ಶಾಂತಿಯನ್ನು ಮರಳಿಸಲು ಮಾತುಕತೆಗಳಿಂದ ಮಾತ್ರ ಸಾಧ್ಯ,ಬೇರೆ ಯಾವುದೇ ಮಾರ್ಗವಿಲ್ಲ ಎಂದರು.