ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರಿಗೆ ಮಾತ್ರ ಸ್ಥಳೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ: ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು
Photo : PTI
ಅಮರಾವತಿ: ವಿಶ್ವದ ಜನಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನಕ್ಕೇರಿದ್ದು, ಜನಸಂಖ್ಯಾ ಸ್ಫೋಟಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿದೆ. ಈ ಪ್ರವೃತ್ತಿಗೆ ಕೊನೆ ಹಾಡಲು ಈ ಹಿಂದೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಲಾಗುತ್ತಿತ್ತು. ಆದರೆ, ಕುಸಿಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಸರಪಂಚ್, ಕೌನ್ಸಿಲರ್ ಅಥವಾ ಮೇಯರ್ ಆಗಲು ಬಯಸುವವರು ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರಬೇಕು ಎಂಬ ನೀತಿಯನ್ನು ತರಲು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮುಂದಾಗಿದ್ದಾರೆ.
ಜನರು ಹೆಚ್ಚು ಮಕ್ಕಳನ್ನು ಪಡೆಯುವಂತೆ ಪ್ರೋತ್ಸಾಹಿಸುವ ನೀತಿಗಳನ್ನು ಜಾರಿಗೆ ತರಲಾಗುವುದು ಎಂದು ಚಂದ್ರಬಾಬು ನಾಯ್ಡು ಪ್ರಕಟಿಸಿದ್ದಾರೆ.
“ಒಂದು ಕಾಲದಲ್ಲಿ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಪಂಚಾಯತಿ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗುತ್ತಿರಲಿಲ್ಲ. ಆದರೀಗ ಕಡಿಮೆ ಸಂಖ್ಯೆಯ ಮಕ್ಕಳನ್ನು ಹೊಂದಿರುವವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನಿಮಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ ಮಾತ್ರ ಸರಪಂಚ್, ಮುನಿಸಿಪಿಲ್ ಕೌನ್ಸಿಲರ್. ಮಹಾನಗರ ಪಾಲಿಕೆ ಅಧ್ಯಕ್ಷ ಅಥವಾ ಮೇಯರ್ ಆಗಲು ಸಾಧ್ಯ” ಎಂದು ಅವರು ಘೋಷಿಸಿದ್ದಾರೆ.
ಉತ್ತರ ಭಾರತವು ಇನ್ನು 15 ವರ್ಷಗಳಲ್ಲಿ ಸ್ಥಿರ ಫಲವಂತಿಕೆಯ ಲಾಭವನ್ನು ಕಳೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಹಳೆಯ ತಲೆಮಾರು ಹೆಚ್ಚು ಮಕ್ಕಳನ್ನು ಹೊಂದಿರುತ್ತಿದ್ದರು. ಆದರೆ, ಹಾಲಿ ತಲೆಮಾರು ಈ ಸಂಖ್ಯೆಯನ್ನು ಒಂದಕ್ಕೆ ತಂದಿದೆ. ಇನ್ನೂ ಹೆಚ್ಚು ಜಾಣರು ಮೋಜು ಮಾಡಲು ದುಪ್ಪಟ್ಟು ಆದಾಯ, ಮಕ್ಕಳು ಬೇಡ (DINK) ನೀತಿಯತ್ತ ಹೋಗುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕೊರಿಯಾ, ಜಪಾನ್ ಹಾಗೂ ಯೂರೋಪ್ ಖಂಡವನ್ನು ಉದಾಹರಿಸಿದ ಚಂದ್ರಬಾಬು ನಾಯ್ಡು, ಅಲ್ಲಿನ ಜನ ಕುಸಿಯುತ್ತಿರುವ ಜನಸಂಖ್ಯೆಯ ಅಪಾಯದ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಸಂಪತ್ತು ಸೃಷ್ಟಿ, ಹೆಚ್ಚು ಆದಾಯ ಗಳಿಸುವ ಮೂಲಕ ತಮ್ಮ ದೇಶಗಳನ್ನು ಪ್ರಗತಿಯತ್ತ ಕೊಂಡೊಯ್ಯಲು ಬಯಸಿದರು ಎಂದು ಹೇಳಿದ್ದಾರೆ.
“ಅವರಿಗೀಗ ಜನ ಬೇಕಾಗಿದೆ. ನಾವು ಜನರನ್ನು ಅಲ್ಲಿಗೆ ಕಳಿಸಬೇಕಿದೆ. ನಾವೀಗ ಆ ಸ್ಥಿತಿ ತಲುಪಿದ್ದೇವೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.