ಪ್ರಧಾನಿ ಹುದ್ದೆಗೆ ಬೆಂಬಲಿಸುವ ಭರವಸೆ ನೀಡಿದ್ದ ವಿಪಕ್ಷಗಳು: ಗಡ್ಕರಿ ಸ್ಫೋಟಕ ಹೇಳಿಕೆ
PC: PTI
ನಾಗ್ಪುರ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳು, ನನ್ನನ್ನು ಪ್ರಧಾನಿಹುದ್ದೆಗೆ ಬೆಂಬಲಿಸುವ ಭರವಸೆ ನೀಡಿದ್ದವು. ಆದರೆ ನಾನು ಆ ಪ್ರಸ್ತಾವವನ್ನು ತಿರಸ್ಕರಿಸಿದ್ದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಹಿರಂಗಪಡಿಸಿದ್ದಾರೆ.
ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ತಮ್ಮ ಬದ್ಧತೆ ಹಾಗೂ ಪಕ್ಷ ನಿಷ್ಠೆಯನ್ನು ಪುನರುಚ್ಚರಿಸಿದ ಅವರು, ಯಾವುದೇ ಹುದ್ದೆಗಾಗಿ ನನ್ನ ತತ್ವಗಳಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
"ಪ್ರಧಾನಿಯಾಗುವುದು ನನ್ನ ಜೀವನದ ಗುರಿಯಲ್ಲ. ನೀವು ಏಕೆ ನನ್ನನ್ನು ಬೆಂಬಲಿಸಬೇಕು. ನಾನು ಏಕೆ ನಿಮ್ಮ ಬೆಂಬಲ ಸ್ವೀಕರಿಸಬೇಕು ಎಂದು ವಿರೋಧ ಪಕ್ಷದ ಮುಖಂಡರನ್ನು ಪ್ರಶ್ನಿಸಿದೆ. ವ್ಯಕ್ತಿಗಳ ಬದ್ಧತೆ ಭಾರತೀಯ ಪ್ರಜಾಪ್ರಭುತ್ವದ ಅಡಿಗಲ್ಲು" ಎಂದರು.
ಸಾರ್ವತ್ರಿಕ ಚುನಾವಣೆಗೆ ಮುನ್ನ ದೇಶದ ಅತ್ಯುನ್ನತ ಹುದ್ದೆಗೆ ತಮ್ಮ ಹೆಸರನ್ನು ಪರಿಗಣಿಸಲಾಗಿತ್ತು ಎಂಬ ವದಂತಿಗಳನ್ನು ದೃಢಪಡಿಸಿದರು. ಕಳೆದ ಮಾರ್ಚ್ ನಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಪಿಎಂ ಹುದ್ದೆಗೆ ನಾನು ರೇಸ್ ನಲ್ಲಿಲ್ಲ. ಸಂಘ ಸಿದ್ಧಾಂತಕ್ಕೆ ನಾನು ಬದ್ಧ ಎಂದು ಹೇಳಿದ್ದರು.
ಪತ್ರಕರ್ತರು ಉನ್ನತ ಮಟ್ಟದ ಬದ್ಧತೆಯನ್ನು ಉಳಿಸಿಕೊಂಡು, ಭವಿಷ್ಯದ ಪೀಳಿಗೆಗೆ ಬದ್ಧತೆಯನ್ನು ವರ್ಗಾಯಿಸಬೇಕು ಎಂದು ಸಲಹೆ ಮಾಡಿದರು. ಕಠಿಣ ಪರಿಶ್ರಮದ ಹೊರತಾಗಿಯೂ ಪತ್ರಕರ್ತರು ಅದಕ್ಕೆ ತಕ್ಕ ಹಣಕಾಸು ನೆರವು ಪಡೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.