ಕಾಂಬೋಡಿಯಾದಲ್ಲಿ 5000ಕ್ಕೂ ಅಧಿಕ ಭಾರತೀಯರಿಗೆ ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಶಾಮೀಲಾಗಲು ಒತ್ತಡ
250ಕ್ಕೂ ಅಧಿಕ ಮಂದಿಯ ರಕ್ಷಣೆ
ಹೊಸದಿಲ್ಲಿ: ಕ್ಯಾಂಬೋಡಿಯಾದಲ್ಲಿ ಸುಮಾರು 5,000ಕ್ಕೂ ಅಧಿಕ ಭಾರತೀಯ ನಾಗರಿಕರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಇರಿಸಿಕೊಂಡು ಭಾರತದಲ್ಲಿನ ಜನರನ್ನು ಗುರಿಯಾಗಿಸಿ ಆನ್‌ಲೈನ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗುವಂತೆ ಬಲವಂತಪಡಿಸಲಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ಈ ವಂಚನೆಯ ಪ್ರಮಾಣ ರೂ. 500 ಕೋಟಿಗೂ ಅಧಿಕವಾಗಿದೆ ಎನ್ನಲಾಗಿದ್ದು ಈ ಸಮಸ್ಯೆ ಬಗೆಹರಿಸಲು ಭಾರತ ಮತ್ತು ಕ್ಯಾಂಬೋಡಿಯಾ ಸರ್ಕಾರಗಳು ಜಂಟಿ ಪ್ರಯತ್ನ ನಡೆಸುತ್ತಿವೆ.
ಉದ್ಯೋಗದ ಭರವಸೆ ದೊರೆತು ಕ್ಯಾಂಬೋಡಿಯಾಗೆ ಪ್ರಯಾಣಿಸಿದವರು ಅಲ್ಲಿ ಅಕ್ರಮ ಸೈಬರ್ ಚಟುವಟಿಕೆಗಳಲ್ಲಿ ಬಲವಂತವಾಗಿ ಭಾಗವಹಿಸುವಂತಾಗಿರುವ ಭಾರತೀಯ ನಾಗರಿಕರ ದೂರುಗಳನ್ನು ಕ್ಯಾಮಬೋಡಿಯಾದಲ್ಲಿನ ಭಾರತೀಯ ದೂತಾವಾಸ ಪರಿಹರಿಸಲು ಯತ್ನಿಸುತ್ತಿದೆ. ಇಲ್ಲಿಯ ತನಕ ಸುಮಾರು 250 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ವಾಪಸ್ ಕಳಿಸಲಾಗಿದೆ.
ಕಾನೂನು ಜಾರಿ ಅಧಿಕಾರಗಳ ಸೋಗಿನಲ್ಲಿ ಭಾರತೀಯರನ್ನು ಸಂಪರ್ಕಿಸಿ ಅವರಿಗೆ ಶಂಕಾಸ್ಪದ ಪ್ಯಾಕೇಜ್‌ಗಳು ಬಂದಿವೆ ಎಂದು ನಂಬಿಸಿ ಅವರಿಂದ ಹಣ ವಸೂಲಿ ಮಾಡಲು ಕ್ಯಾಂಬೋಡಿಯಾದಲ್ಲಿ ಭಾರತೀಯರನ್ನು ಬಲವಂತಪಡಿಸಲಾಗಿತ್ತೆಂದು ತಿಳಿದು ಬಂದಿದೆ.
ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ರೂ 67 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡ ನಂತರ ಈ ಬೆಳವಣಿಗೆ ನಡೆದಿದೆ. ಒಡಿಶಾದ ರೂರ್ಕೆಲಾ ಪೊಲೀಸರು ಸೈಬರ್-ಕ್ರೈಂ ಜಾಲಕ್ಕೆ ಸೇರಿದ್ದ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ತಮ್ಮ ಆದೇಶದಂತೆ ಕೆಲಸ ಮಾಡಲು ಆರೋಪಿಗಳು ಸಂತ್ರಸ್ತರಿಗೆ ದೈಹಿಕ ಕಿರುಕುಳ ನೀಡುತ್ತಿದ್ದರು ಹಾಗೂ ಅವರನ್ನು ಕೂಡಿ ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.