ಹೆಲಿಕಾಪ್ಟರ್ ಪತನಗೊಂಡು ನಾಪತ್ತೆಯಾಗಿದ್ದ ಯೋಧನ ಮೃತದೇಹ ಒಂದು ತಿಂಗಳ ಬಳಿಕ ಪತ್ತೆ
ಕಮಾಂಡರ್ ರಾಕೇಶ್ ಕುಮಾರ್ ರಾಣಾ (Photo credit: NDTV)
ಹೊಸದಿಲ್ಲಿ: ಸೆಪ್ಟೆಂಬರ್ ತಿಂಗಳಲ್ಲಿ ತಾನು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡ ನಂತರ ನಾಪತ್ತೆಯಾಗಿದ್ದ ಭಾರತೀಯ ಕರಾವಳಿ ಕಾವಲು ಪಡೆಯ ಯೋಧರೊಬ್ಬರ ಮೃತದೇಹವು ಗುಜರಾತ್ ನ ಕರಾವಳಿ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 2ರಂದು ಅರಬ್ಬೀ ಸಮುದ್ರದಲ್ಲಿ ಪತನಗೊಂಡಿದ್ದ ALH MK-III ಹೆಲಿಕಾಪ್ಟರ್ ನಲ್ಲಿ ಇನ್ನಿತರ ನಾಲ್ವರೊಂದಿಗೆ ಕಮಾಂಡರ್ ರಾಕೇಶ್ ಕುಮಾರ್ ರಾಣಾ ಪ್ರಯಾಣಿಸುತ್ತಿದ್ದರು. ಹೆಲಿಕಾಪ್ಟರ್ ಪತನಗೊಂಡ ಬೆನ್ನಿಗೇ, ಓರ್ವ ಹೆಲಿಕಾಪ್ಟರ್ ಸಿಬ್ಬಂದಿಯನ್ನು ರಕ್ಷಿಸಿ, ಉಳಿದಿಬ್ಬರಾದ ಕಮಾಂಡರ್ (ಜೆಜಿ) ವಿಪಿನ್ ಬಾಬು ಹಾಗೂ ಪ್ರಧಾನ ನಾವಿಕ ಕರಣ್ ಸಿಂಗ್ ಮೃತದೇಹಗಳು ಪತ್ತೆಯಾಗಿತ್ತು.
ಹೆಲಿಕಾಪ್ಟರ್ ಪತನಗೊಂಡ ನಂತರ ಭಾರತೀಯ ಕರಾವಳಿ ಕಾವಲು ಪಡೆಯು ವ್ಯಾಪಕ ಶೋಧ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿತ್ತಾದರೂ, ಒಂದು ತಿಂಗಳಾದರೂ ರಾಣಾರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಇದೀಗ ರಾಣಾರ ಮೃತದೇಹವನ್ನು ಗುಜರಾತ್ ನ ನೈರುತ್ಯ ಪೋರಬಂದರ್ ನಿಂದ 55 ಕಿಮೀ ದೂರದಲ್ಲಿ ಗುರುವಾರ ಪತ್ತೆ ಹಚ್ಚಲಾಗಿದೆ ಎಂದು ಭಾರತೀಯ ಕರಾವಳಿ ಕಾವಲು ಪಡೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಪೂರ್ಣ ಸೇನಾ ಗೌರವಗಳೊಂದಿಗೆ ರಾಣಾರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಸಲಾಗುವುದು ಎಂದೂ ಭಾರತೀಯ ಕರಾವಳಿ ಕಾವಲು ಪಡೆ ತಿಳಿಸಿದೆ.