ದಿಲ್ಲಿಯಲ್ಲಿ ಏಪ್ರಿಲ್ 1ರಿಂದ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಪೆಟ್ರೋಲ್ ನೀಡುವುದಿಲ್ಲ : ಸಚಿವ ಮಂಜಿಂದರ್ ಸಿಂಗ್ ಸಿರ್ಸಾ

ಸಾಂದರ್ಭಿಕ ಚಿತ್ರ | indiatoday
ಹೊಸದಿಲ್ಲಿ: ದಿಲ್ಲಿಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ ಇಟ್ಟಿರುವ ನೂತನ ಬಿಜೆಪಿ ಸರಕಾರ, 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಏಪ್ರಿಲ್ 1ರಿಂದ ಪಂಪ್ಗಳಲ್ಲಿ ಪೆಟ್ರೋಲ್ ತುಂಬಲು ಅನುಮತಿಸುವುದಿಲ್ಲ ಎಂದು ತಿಳಿಸಿದೆ.
ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಈ ಕುರಿತು ಮಾಹಿತಿ ನೀಡಿದ್ದು, ದಿಲ್ಲಿಯಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಪತ್ತೆಹಚ್ಚಲು ತಂಡವನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.
ನಾವು ಪೆಟ್ರೋಲ್ ಪಂಪ್ಗಳಲ್ಲಿ ಗ್ಯಾಜೆಟ್ಗಳನ್ನು ನಿರ್ಮಿಸುತ್ತೇವೆ. ಈ ಮೂಲಕ 15 ವರ್ಷಗಳಿಗಿಂತ ಹಳೆಯದಾದ ವಾಹನಗಳನ್ನು ಗುರುತಿಸಿ ಅವುಗಳಿಗೆ ಇಂಧನವನ್ನು ನೀಡದಿರಲು ತೀರ್ಮಾನಿಸಲಾಗುವುದು ಎಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಂಜಿಂದರ್ ಸಿರ್ಸಾ ಹೇಳಿದರು.
ರಾಷ್ಟ್ರ ರಾಜಧಾನಿ ದಿಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳನ್ನು ರಸ್ತೆಗಿಳಿಸದಂತೆ ನಿರ್ಬಂಧಿಸುವ ನೀತಿಯನ್ನು ಹೊಂದಿದೆ. 2022ರ ಜನವರಿ 1ರ ನಂತರ ನಿಯಮ ಮೀರಿದ ವಾಹನಗಳು ರಸ್ತೆಗಿಳಿಯುವುದು ಕಂಡುಬಂದರೆ ಅಂತಹ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ಗುಜಿರಿಗೆ ಕಳುಹಿಸಲಾಗುವುದು ಎಂದು 2021ರ ಆದೇಶದಲ್ಲಿ ಹೇಳಲಾಗಿದೆ.
ದಿಲ್ಲಿಗೆ ಪ್ರವೇಶಿಸುವ ಘನ ವಾಹನಗಳ ಮೇಲೆ ಸರಕಾರ ಮೊದಲು ಗಮನ ಹರಿಸಲಿದೆ. ನಂತರ ನಿಯಮಗಳನ್ನು ಅನುಸರಿಸುತ್ತಿದೆಯೇ ಎಂದು ಪರಿಶೀಲಿಸುತ್ತದೆ ಎಂದು ಸಿರ್ಸಾ ಹೇಳಿದರು.