ಪಹಲ್ಗಾಮ್ ಭಯೋತ್ಪಾದಕ ದಾಳಿ | “ನಝಕತ್ ಭಾಯಿ ನಮ್ಮನ್ನು ರಕ್ಷಿಸಲು ತನ್ನ ಜೀವವನ್ನೇ ಪಣಕ್ಕಿಟ್ಟಿದ್ದರು”
ವ್ಯಾಪಾರಿಯ ಸಾಹಸವನ್ನು ಪ್ರಶಂಸಿಸಿದ ಬಿಜೆಪಿ ನಾಯಕನ ಕುಟುಂಬ

PC : X \ @zoo_bear
ರಾಯಪುರ : ಕನಿಷ್ಠ 26 ಜನರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿ ಸಂದರ್ಭದಲ್ಲಿ ಛತ್ತೀಸ್ ಗಡದ ಚಿರ್ಮಿರಿಯ 11 ಪ್ರವಾಸಿಗಳ ಜೀವಗಳನ್ನು ಉಳಿಸುವ ಮೂಲಕ ಸ್ಥಳೀಯ ಬಟ್ಟೆ ವ್ಯಾಪಾರಿ ನಝಕತ್ ಅಲಿ ಹಿರೋ ಆಗಿ ಹೊರಹೊಮ್ಮಿದ್ದಾರೆ.
ಸ್ನೇಹಿತರಾದ ಶಿವಾಂಶ ಜೈನ್, ಹ್ಯಾಪಿ ಬರ್ಧ್ವಾನ್, ಅರವಿಂದ್ ಅಗರ್ವಾಲ್ ಮತ್ತು ಕುಲದೀಪ ಸ್ಥಪಕ್ ತಮ್ಮ ಕುಟುಂಬಗಳೊಂದಿಗೆ ರಜಾ ದಿನಗಳನ್ನು ಕಳೆಯಲು ಎ.18ರಂದು ಹೊರಟು ಎ.21ರಂದು ಪಹಲ್ಗಾಮ್ ಸಮೀಪದ ಬೈಸರಾನ್ ಕಣಿವೆಯ ಹುಲ್ಲುಗಾವಲನ್ನು ತಲುಪಿ, ಅಲ್ಲಿ ತಂಗಿದ್ದರು. ಎ.22ರಂದು ದಿಢೀರ್ ಭೂಕುಸಿತವು ರಸ್ತೆಗಳಿಗೆ ತಡೆಯನ್ನುಂಟು ಮಾಡಿದ್ದು, ನೂರಾರು ಪ್ರವಾಸಿಗಳು ಅಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇದೇ ಸಮಯದಲ್ಲಿ ಏಕಾಏಕಿ ಬಂದೂಕುಧಾರಿಗಳು ಗುಂಡುಗಳನ್ನು ಹಾರಿಸಿದ್ದರು.
‘ನನ್ನ ಸ್ನೇಹಿತರು ಮತ್ತು ಕುಟುಂಬ ವರ್ಗದವರು ಭೀತಿಯಿಂದ ಹೆಪ್ಪುಗಟ್ಟಿದ್ದರು. ನಝಕತ್ ಭಾಯಿ ಧೈರ್ಯ ಕಳೆದುಕೊಂಡಿರಲಿಲ್ಲ. ಅವರು ಒಂದು ಮಗುವನ್ನು ತನ್ನ ಬೆನ್ನಿನ ಮೇಲೆ ಏರಿಸಿಕೊಂಡಿದ್ದರು, ಇನ್ನೊಂದು ಮಗುವನ್ನು ತೋಳುಗಳಲ್ಲಿ ಹಿಡಿದುಕೊಂಡಿದ್ದರು ಮತ್ತು ನಮ್ಮನ್ನೆಲ್ಲ ಸುರಕ್ಷಿತವಾಗಿ ಅಲ್ಲಿಂದ ಪಾರು ಮಾಡಿದ್ದರು’ ಎಂದು ಬಿಜೆಪಿ ಯುವಮೋರ್ಚಾದ ಸದಸ್ಯರಾಗಿರುವ ಅರವಿಂದ ಅಗರ್ವಾಲ್ ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದಿದ್ದಾರೆ. ಅವರ ಪತ್ನಿ ಬಿಜೆಪಿ ಕೌನ್ಸಿಲರ್ ಆಗಿದ್ದು,ಅವರೂ ಪತಿಯ ಜೊತೆಯಲ್ಲಿದ್ದರು.
ಭಯೋತ್ಪಾದಕರ ದಾಳಿಯಲ್ಲಿ ತನ್ನ ಸ್ವಂತ ಸೋದರ ಮಾವ ಆದಿಲ್ ಹುಸೇನ್ ಶಾ ಸಾವನ್ನಪ್ಪಿದ್ದರೂ ನಝಕತ್ ಇತರರಿಗೆ ನೆರವಾಗುವಲ್ಲಿ ಗಮನವನ್ನು ಕೇಂದ್ರೀಕರಿಸಿದ್ದರು.
‘ನಮ್ಮನ್ನು ಉಳಿಸಲು ನಝಕತ್ ಭಾಯಿ ತನ್ನ ಜೀವವನ್ನೇ ಪಣಕ್ಕಿಟ್ಟಿದ್ದರು. ಅವರ ಋಣವನ್ನು ನಾವೆಂದಿಗೂ ತೀರಿಸಲು ಸಾಧ್ಯವಿಲ್ಲ ’ಎಂದು ಅರವಿಂದ್ ಪೋಸ್ಟ್ನಲ್ಲಿ ಹೇಳಿದ್ದಾರೆ.
ರಕ್ಷಿಸಲ್ಪಟ್ಟ ಕುಟುಂಬಗಳ ಪೈಕಿ ಒಂದರ ಸಂಬಂಧಿ, ಸ್ಥಳೀಯ ನಿವಾಸಿ ರಾಕೇಶ ಪರಾಸರ ಅವರು ಒತ್ತಡದ ನಡುವೆಯೂ ನಝಕತ್ ಅವರ ಶಾಂತತೆಯನ್ನು ಪ್ರಶಂಸಿಸಿದರು.
‘ನನ್ನ ಸೋದರಳಿಯನ ಕುಟುಂಬದಲ್ಲಿ ಮೂವರು ಮಕ್ಕಳಿದ್ದರು. ನಝಕತ್ ಎಲ್ಲರನ್ನೂ ತನ್ನ ಲಾಡ್ಜ್ಗೆ ಕರೆದೊಯ್ದಿದ್ದರು ಮತ್ತು ನಾವು ಸುರಕ್ಷಿತವಾಗಿ ಛತ್ತೀಸ್ ಗಡಕ್ಕೆ ಹೊರಡುವವರೆಗೆ ನಮಗೆ ಆಶ್ರಯ ನೀಡಿದ್ದರು ’ಎಂದರು.
ಪ್ರತಿ ಚಳಿಗಾಲದಲ್ಲಿ ಚಿರ್ಮಿರಿಯಲ್ಲಿ ಬೆಚ್ಚನೆಯ ಉಡುಪುಗಳನ್ನು ಮಾರಾಟ ಮಾಡುವ ನಝಕತ್ ಅಲಿಗೆ ಹಲವು ವರ್ಷಗಳಿಂದಲೂ ಈ ಕುಟುಂಬಗಳ ಪರಿಚಯವಿತ್ತು. ಅವರ ಚುರುಕಾದ ಕ್ರಮ ಕಾಶ್ಮೀರದಲ್ಲಿ ಮತ್ತು ಅವರ ತವರು ಜಿಲ್ಲೆ ಸರ್ಗುಜಾದಲ್ಲಿ ಅವರಿಗೆ ಕೃತಜ್ಞತೆ ಮತ್ತು ಗೌರವಗಳನ್ನು ಗಳಿಸಿದೆ. ಶೌರ್ಯ ಮತ್ತು ಮಾನವತೆಗೆ ಅವರು ನಿದರ್ಶನವಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮತ್ತು ಜನರು ನಝಕತ್ ಅಲಿಯವರನ್ನು ಪ್ರಶಂಸಿಸುತ್ತಿದ್ದಾರೆ.