ಜಮ್ಮು ಗಡಿಯಲ್ಲಿ ಡ್ರೋನ್ ನಿರೋಧಕ ವ್ಯವಸ್ಥೆಯನ್ನು ನಿಯೋಜಿಸಿದ ನಂತರ ಪಾಕಿಸ್ತಾನದ ಚಟುವಟಿಕೆಗಳು ಶೂನ್ಯಗೊಂಡಿವೆ : ಬಿಎಸ್ಎಫ್
ಸಾಂದರ್ಭಿಕ ಚಿತ್ರ | PC : PTI
ಜಮ್ಮು: ಜಮ್ಮು ಗಡಿಯಲ್ಲಿ ಡ್ರೋನ್ ನಿರೋಧಕ ವ್ಯವಸ್ಥೆಯನ್ನು ನಿಯೋಜಿಸಿದ ನಂತರ, ಪಾಕಿಸ್ತಾನದ ಚಟುವಟಿಕೆಗಳು ಬಹುತೇಕ ಶೂನ್ಯಕ್ಕೆ ಕುಸಿದಿವೆ ಎಂದು ಶುಕ್ರವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಾಂತ್ರಿಕ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಸೇನಾಪಡೆಗಳು ಡ್ರೋನ್ಗಳ ಪ್ರತಿಕೂಲ ಪರಿಣಾಮಗಳನ್ನು ತಡೆಯುವಲ್ಲಿ ತುಂಬಾ ಮುಂದಿವೆ ಎಂದೂ ಅವರು ಹೇಳಿದ್ದಾರೆ.
ಭಾರತವಿಂದು ಹಳೆ ಮಾದರಿಯ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಂತಹ ದೇಶವಲ್ಲ. ಅದು ನೂತನ ತಂತ್ರಜ್ಞಾನ ಮತ್ತು ಸುಧಾರಿತ ಶಸ್ತ್ರಾಸ್ತ್ರಗಳನ್ನು ಅಳವಡಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದೆ ಎಂದೂ ಬಿಎಸ್ಎಫ್ನ ಜಮ್ಮು ಫ್ರಾಂಟಿಯರ್ ಪೊಲೀಸ್ ಮಹಾ ನಿರೀಕ್ಷಕ ಡಿ.ಕೆ.ಬೂರಾ ಹೇಳಿದ್ದಾರೆ.
ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲ ನಿಯೋಜನೆಯೊಂದಿಗೆ, ಜಮ್ಮು ಪ್ರಾಂತ್ಯದ ಗಡಿಗುಂಟ ತಾಂತ್ರಿಕ ನಿಗಾವಣೆ ಅಸ್ತಿತ್ವದಲ್ಲಿದೆ ಹಾಗೂ ಇದನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಗಡಿ ಭದ್ರತಾ ಪಡೆಯ 60ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ತಮ್ಮ ಸೇನಾ ತುಕಡಿಯು ಜಮ್ಮುವಿನಲ್ಲಿ ಮಾಡಿರುವ ಸಾಧನೆಗಳ ಕುರಿತು ಒತ್ತಿ ಹೇಳಿದ್ದಾರೆ. ನಮ್ಮ ವಲಯವು ಅತಿ ಸೂಕ್ಷ್ಮ ಗಡಿಯನ್ನು ಹೊಂದಿದ್ದು, ಅದನ್ನು ದಿನದ 24 ಗಂಟೆಯೂ ಮಾನವ ಸಂಪನ್ಮೂಲವನ್ನು ಬಳಸಿ ನಿಗಾ ವಹಿಸಲಾಗುತ್ತಿದೆ. ಇದರೊಂದಿಗೆ, ಗಡಿಯಿಂದ ಯಾವುದೇ ಒಳ ನುಸುಳುವಿಕೆ ನಡೆಯದಂತೆ ಸುಧಾರಿತ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.