PUBG ಮೂಲಕ ಭಾರತೀಯನೊಂದಿಗೆ ಪ್ರೇಮಾಂಕುರ: ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ನುಸುಳಿದ ಪಾಕಿಸ್ತಾನ ಮಹಿಳೆ
ಸಾಂದರ್ಭಿಕ ಚಿತ್ರ Photo: PTI
ನೊಯ್ಡಾ: 'ಪ್ರೇಮ ಕುರುಡು' ಎಂಬ ಮಾತು ಅನಾದಿ ಕಾಲದಿಂದಲೂ ಚಾಲ್ತಿಯಿದೆ. ಆ ಮಾತನ್ನು ಮತ್ತೆ ನಿರೂಪಿಸುವಂತೆ ಪಾಕಿಸ್ತಾನದ 27 ವರ್ಷದ ಮಹಿಳೆಯಾದ ಸೀಮಾ ಹೈದರ್ ಎಂಬಾಕೆ ತನ್ನ ಭಾರತೀಯ ಪ್ರಿಯಕರನಿಗಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ಕರಾಚಿಯಿಂದ ಭಾರತಕ್ಕೆ ನುಸುಳಿ ಬಂದಿರುವ ಘಟನೆ ನಡೆದಿದೆ ಎಂದು timesofindia.com ವರದಿ ಮಾಡಿದೆ.
ಅವರು ಮೊದಲು ದುಬೈಗೆ ಹಾರಿದ್ದು, ಅಲ್ಲಿಂದ ಸಂಪರ್ಕ ವಿಮಾನವನ್ನೇರಿ ನೇಪಾಳದ ಕಠ್ಮಂಡು ತಲುಪಿದ್ದಾರೆ. ನಂತರ ನೇಪಾಳದ ರಾಜಧಾನಿಯಿಂದ ಪೋಖರಾ ತಲುಪಿರುವ ಅವರು, ಬಸ್ ಮೂಲಕ ಪ್ರಯಾಣಿಸಿ ಭಾರತದ ಗಡಿಯನ್ನು ಕಾನೂನುಬಾಹಿರವಾಗಿ ದಾಟಿದ್ದಾರೆ. ಮಹಿಳೆಯೊಬ್ಬಳು ತನ್ನ ನಾಲ್ಕು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದುದರಿಂದ ಗಡಿ ಭಾಗದ ತಪಾಸಣೆಯ ಹೊರತಾಗಿಯೂ ಯಾವುದೇ ಸಂಶಯ ಮೂಡದಿರುವುದರಿಂದ ಇದು ಸಾಧ್ಯವಾಗಿದೆ.
ನಂತರ ದಿಲ್ಲಿ ತಲುಪಿರುವ ಆ ಐದು ಮಂದಿ, ಗ್ರೇಟರ್ ನೊಯ್ಡಾದಲ್ಲಿನ ರಾಬುಪುರದ ದಿನಸಿ ಅಂಗಡಿಯ ನೌಕರನಾಗಿರುವ 22 ವರ್ಷದ ಸಚಿನ್ನ ಸಾಧಾರಣ ಮನೆಯಿಂದ ಅನತಿ ದೂರ ಮಾತ್ರ ಉಳಿದಿದ್ದಾರೆ.
ಈ ಇಬ್ಬರು ಪ್ರೇಮಿಗಳು 2020ರ ಸಾಂಕ್ರಾಮಿಕ ಸಮಯದಲ್ಲಿ PUBG ಮೂಲಕ ಪರಸ್ಪರ ಭೇಟಿಯಾಗಿದ್ದು, ಒಂದೇ ನೋಟಕ್ಕೆ ಇಬ್ಬರಲ್ಲೂ ಪ್ರೇಮಾಂಕುರವಾಗಿದೆ.
ಅವರಿಬ್ಬರೂ ವಿವಾಹವಾಗಲು ಸಿದ್ಧರಾಗಿದ್ದರಾದರೂ, ವಕೀಲರೊಬ್ಬರು ಹೈದರ್ ಕುರಿತ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಅವರು ನೀಡಿದ ಮಾಹಿತಿಯನ್ನು ಆಧರಿಸಿ ರವಿವಾರ ಪ್ರೇಮಿಗಳಿಬ್ಬರನ್ನು ಹರಿಯಾಣದ ಬಲ್ಲಭ್ಗಢ್ ಬಳಿ ಪೊಲೀಸರು ಬಂಧಿಸಿದ್ದಾರೆ.
ರವಿವಾರ ಪೊಲೀಸರು ವಶಕ್ಕೆ ಪಡೆದಿರುವ ಸೀಮಾ ಹೈದರ್ ಮೇ ತಿಂಗಳ ಮೂರನೆಯ ವಾರದಲ್ಲಿ ಭಾರತವನ್ನು ಪ್ರವೇಶಿಸಿದ್ದು, ಒಂದು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ಸಚಿನ್ನೊಂದಿಗೆ ವಾಸಿಸುತ್ತಿದ್ದಾಳೆ. ಅವರಿಬ್ಬರು ವಿವಾಹವಾಗಲು ಆಕೆಯ ವಾಸ ಹಾಗೂ ಕಾನೂನುಬದ್ಧತೆಯ ಕುರಿತು ಸಲಹೆ ಪಡೆಯಲು ಸ್ಥಳೀಯ ವಕೀಲರೊಬ್ಬರನ್ನು ಸಂಪರ್ಕಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಕೂಡಲೇ ಆ ವಕೀಲರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
"ಆಕೆ ಮತ್ತು ಆಕೆಯ ನಾಲ್ಕು ಮಕ್ಕಳು (ಮೂವರು ಪುತ್ರಿಯರು ಹಾಗೂ ಓರ್ವ ಪುತ್ರ) ಪಾಕಿಸ್ತಾನ ಪಾಸ್ಪೋರ್ಟ್ ಹೊಂದಿರುವುದನ್ನು ಕಂಡು ನಾನು ದಿಗ್ಭ್ರಾಂತನಾದೆ. ಆಕೆ ಭಾರತದಲ್ಲಿ ವಿವಾಹವಾಗಲು ಅನುಸರಿಸಬೇಕಾದ ಪ್ರಕ್ರಿಯೆ ಕುರಿತು ವಿಚಾರಿಸುತ್ತಿದ್ದಳು. ನಾನು ಸಚಿನ್ನನ್ನು ವಿವಾಹವಾಗಬೇಕು ಎಂದು ಆಕೆ ತಿಳಿಸಿದಳು" ಎಂದು ಹೆಸರು ಹೇಳಲಿಚ್ಛಿಸದ ಬುಲಂದ್ಶಹರ್ ಮೂಲದ ವಕೀಲರು TOI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ವಿಷಯವನ್ನು ಪೊಲೀಸರು ಪಾಕಿಸ್ತಾನ ರಾಯಭಾರ ಕಚೇರಿಯ ಗಮನಕ್ಕೆ ತಂದಿದ್ದು, ಪ್ರಕರಣದ ಕುರಿತು ಕೇಂದ್ರ ಗುಪ್ತಚರ ಸಂಸ್ಥೆಗಳು ತನಿಖೆ ಕೈಗೊಂಡಿವೆ.