ಜಮ್ಮುಕಾಶ್ಮೀರ | ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದಿಂದ ಗುಂಡಿನ ದಾಳಿ : ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ

Photo | NDTV
ಹೊಸದಿಲ್ಲಿ: ಗುರುವಾರ ರಾತ್ರಿ ಜಮ್ಮುಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಕೆಲವು ಭಾಗಗಳಲ್ಲಿ ಪಾಕಿಸ್ತಾನದ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರವನ್ನು ನೀಡಿದೆ ಎಂದು ಸೇನಾ ಮೂಲಗಳು ತಿಳಿಸಿರುವ ಬಗ್ಗೆ NDTV ವರದಿ ಮಾಡಿದೆ.
ಪಾಕಿಸ್ತಾನ ಸೇನೆಯು ಗಡಿ ನಿಯಂತ್ರಣ ರೇಖೆಯ ಕೆಲವು ಸ್ಥಳಗಳಲ್ಲಿ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿದೆ. ಇದಕ್ಕೆ ಭಾರತೀಯ ಸೇನೆಯು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿದೆ. ಇದುವರೆಗೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಭಾರತೀಯ ಸೇನಾಧಿಕಾರಿಗಳು ತಿಳಿಸಿರುವ ಬಗ್ಗೆ NDTV ವರದಿ ಮಾಡಿದೆ.
ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಹದಗೆಟ್ಟಿದೆ.
ಪಾಕಿಸ್ತಾನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಭಾರತ ಸರಕಾರ ಇಂಡಸ್ ಜಲ ಒಪ್ಪಂದವನ್ನು ಅಮಾನತುಪಡಿಸಿದೆ. ಅಟಾರಿ ಗಡಿಯಲ್ಲಿರುವ ಚೆಕ್ ಪೋಸ್ಟ್ ಮುಚ್ಚಲು ಮತ್ತು ಹೈಕಮಿಷನ್ಗಳ ಒಟ್ಟಾರೆ ಬಲವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಅಧಿಕೃತ ದಾಖಲೆಗಳೊಂದಿಗೆ ಈ ಗಡಿಮಾರ್ಗವಾಗಿ ಭಾರತ ಪ್ರವೇಶಿಸಿದವರು 2025ರ ಮೇ 1ರೊಳಗೆ ವಾಪಸ್ ಹೋಗುವಂತೆ ಸೂಚಿಸಿದೆ. ಎಸ್ಪಿಇಎಸ್ ವೀಸಾದಡಿ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳು 48 ತಾಸುಗಳೊಳಗೆ ಭಾರತ ತೊರೆಯಬೇಕು ಎಂದು ಸೂಚಿಸಿದೆ.