ಪನ್ನೂನ್ ಪ್ರಕರಣ: ಭಾರತದ ರಾಜತಾಂತ್ರಿಕ ಅಧಿಕಾರಿ ಉಚ್ಚಾಟನೆ?
ಅಮೆರಿಕದ ರಕ್ಷಣಾ ಇಲಾಖೆ ಹೇಳಿದ್ದೇನು?
ಮ್ಯಾಥ್ಯೂ ಮಿಲ್ಲರ್ PC: x.com/narrative_hole
ವಾಷಿಂಗ್ಟನ್: ಕೆನಡಾ ಮತ್ತು ಭಾರತ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಭಾರತದ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಅಮೆರಿಕ ಉಚ್ಚಾಟಿಸಿದೆ ಎಂಬ ವರದಿಗಳನ್ನು ಅಮೆರಿಕದ ರಕ್ಷಣಾ ಇಲಾಖೆ ನಿರಾಕರಿಸಿದೆ.
"ಭಾರತದ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ" ಎಂದು ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ಸಂಬಂಧ ಕೆನಡಾ ಸರ್ಕಾರ ಆರು ಮಂದಿ ಭಾರತೀಯ ಅಧಿಕಾರಿಗಳನ್ನು "ಪರ್ಸನ್ ಆಫ್ ಇಂಟರೆಸ್ಟ್" ಎಂದು ಆದೇಶಿಸಿದ ಬಳಿಕ ಭಾರತ ಅವರನ್ನು ವಾಪಾಸು ಕರೆಸಿಕೊಂಡಿರುವ ಬೆನ್ನಲ್ಲೇ ಅಮೆರಿಕ ಕೂಡಾ ಭಾರತದ ರಾಜತಾಂತ್ರಿಕ ಅಧಿಕಾರಿಯೊಬ್ಬರನ್ನು ಉಚ್ಚಾಟಿಸಿದೆ ಎಂಬ ವದಂತಿ ಹಬ್ಬಿದೆ.
ಖಾಲಿಸ್ತಾನಿ ಪರ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ಅವರ ಹತ್ಯೆಯ ವಿಫಲ ಯತ್ನದಲ್ಲಿ ಪಾತ್ರ ವಹಿಸಿದ ಆರೋಪದಲ್ಲಿ ಭಾರತ ಸರ್ಕಾರದ ಮಾಜಿ ಉದ್ಯೋಗಿ ವಿಕಾಸ್ ಯಾದವ್ ಅವರ ಕುರಿತು ಕೇಳಲಾದ ಪ್ರಶ್ನೆಗೂ ಅವರು ಪ್ರತಿಕ್ರಿಯಿಸಿದರು.
ವಿಕಾಸ್ ಯಾದವ್ ಅವರ ಸಂಭಾವ್ಯ ಗಡೀಪಾರು ಬಗ್ಗೆ ಕೇಳಿದ ಪ್ರಶ್ನೆಗೆ, "ಗಡೀಪಾರು ನಿರ್ಧಾರವು ಅಮೆರಿಕದ ನ್ಯಾಯಾಂಗ ಇಲಾಖೆಯ ವ್ಯಾಪ್ತಿಗೆ ಸಂಬಂಧಿಸಿದ್ದು. ಭಾರತ ಸರ್ಕಾರದ ಜತೆ ಅಮೆರಿಕ ಸರ್ಕಾರ ಮಾತುಕತೆ ನಡೆಸುತ್ತಿದೆ" ಎಂದರು. ಇತ್ತೀಚೆಗೆ ಭಾರತೀಯ ನಿಯೋಗ ವಾಷಿಂಗ್ಟನ್ ಗೆ ಭೇಟಿ ನೀಡಿ, ತನಿಖೆ ಪ್ರಗತಿ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡಿತ್ತು.