ಪ್ಯಾರಿಸ್ ಒಲಿಂಪಿಕ್ಸ್: ಕುದುರೆ ಸವಾರಿಯಲ್ಲಿ ಭಾರತದ ಚೊಚ್ಚಲ ಸ್ಪರ್ಧೆ
PC : PTI
ಹೊಸದಿಲ್ಲಿ: ಒಲಿಂಪಿಕ್ಸ್ ನಲ್ಲಿ ಈಗ ಉಳಿದಿರುವ, ಪ್ರಾಣಿಯನ್ನೊಳಗೊಂಡ ಒಂದೇ ಒಂದು ಸ್ಪರ್ಧೆಯೆಂದರೆ ಕುದುರೆ ಸವಾರಿ (ಈಕ್ವೆಸ್ಟ್ರಿಯನ್). ಪ್ರಾಚೀನ ಒಲಿಂಪಿಕ್ಸ್ ಗಳಲ್ಲಿ ರಥದ ಓಟ ಮತ್ತು ಕುದುರೆ ಓಟ ಪಂದ್ಯಾವಳಿಯ ಭಾಗಗಳಾಗಿದ್ದವು. ಕುದುರೆಗಳು ಈಗಲೂ ಒಲಿಂಪಿಕ್ಸ್ ನ ಭಾಗವಾಗಿ ಮುಂದುವರಿದಿವೆ. ಈ ವರ್ಷದ ಜುಲೈ ಮತ್ತು ಆಗಸ್ಟ್ ನಲ್ಲಿ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ, ಕುದುರೆ ಸವಾರಿ ಸ್ಪರ್ಧೆಯಲ್ಲಿ ಓರ್ವ ಭಾರತೀಯ ಮೊತ್ತ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಲಿದ್ದಾರೆ.
24 ವರ್ಷದ ಅನುಷ್ ಅಗರ್ವಾಲ್ ಕುದುರೆ ಸವಾರಿಯ ಡ್ರೆಸ್ಸೇಜ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಪ್ಯಾರಿಸ್ನಲ್ಲಿ ಅಗರ್ವಾಲ ‘ಸರ್ ಕ್ಯಾರಮೆಲೊ’ ಎಂಬ ಹೆಸರಿನ ಕುದುರೆಯ ಮೇಲೆ ಸವಾರಿ ಮಾಡಲಿದ್ದಾರೆ. ಇದೇ ಕುದುರೆಯ ಮೇಲೆ ಸವಾರಿ ಮಾಡುತ್ತಾ ಅವರು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕುದುರೆ ಸವಾರಿ ವಿಭಾಗದಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿಕೊಂಡಿದ್ದಾರೆ.
“ಇದು ಕನಸೋ ಎಂಬಂತೆ ಅನಿಸುತ್ತಿದೆ. ಹಾಂಗ್ಝೂ ಏಶ್ಯನ್ ಗೇಮ್ಸ್ನಲ್ಲಿ ಕುದುರೆ ಸವಾರಿಯಲ್ಲಿ ಭಾರತದ ಮೊದಲ ಪದಕವನ್ನು ಗಳಿಸಿದಂದಿನಿಂದ ಒಲಿಂಪಿಕ್ಸ್ ನ ಕುದುರೆ ಸವಾರಿಯ ಡ್ರೆಸ್ಸೇಜ್ ವಿಭಾಗದಲ್ಲಿ ಸ್ಪರ್ಧಿಸಲು ಸಿಕ್ಕಿರುವ ಕೋಟದವರೆಗಿನ ಪ್ರಯಾಣ ಅದ್ಭುತವಾಗಿತ್ತು. ಪ್ರತಿಯೊಂದು ಹಂತದಲ್ಲಿ, ನನ್ನ ಕುದುರೆಯೊಂದಿಗಿನ ಬಾಂಧವ್ಯ ಅನುಪಮವಾಗಿದೆ ಮತ್ತು ಬಹುತೇಕ ಪರಿಪೂರ್ಣವಾಗಿದೆ. ನನ್ನ ನೆಚ್ಚಿನ ನಗರ ಪ್ಯಾರಿಸ್ನಲ್ಲಿ ಪದಕವೊಂದನ್ನು ಗಳಿಸಲು ಸಾಧ್ಯವಾದರೆ ಈ ಸರಣಿಯು ಪೂರ್ಣಗೊಳ್ಳುತ್ತದೆ’’ ಎಂದು ‘ಫಿಟ್ ಇಂಡಿಯ ಚಾಂಪಿಯನ್ಸ್ ಪೋಡ್ಕಾಸ್ಟ್’ನ ಏಕ್ತಾ ವಿಷ್ಣೋಯಿಗೆ ನೀಡಿದ ಸಂದರ್ಶನವೊಂದರಲ್ಲಿ ಅಗರ್ವಾಲ ಹೇಳಿದರು.
ಕೋಲ್ಕತದ ಉದ್ಯಮ ಕುಟುಂಬವೊಂದರಲ್ಲಿ ಜನಿಸಿರುವ ಅಗರ್ವಾಲ, 17ನೇ ವರ್ಷದ ಬಳಿಕ ಜರ್ಮನಿಯ ಬೋರ್ಶನ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಅವರು ಈಗಾಗಲೇ ಎರಡು ಪದಕಗಳನ್ನು ಗೆದ್ದಿದ್ದಾರೆ. ಕಳೆದ ವರ್ಷ ನಡೆದ ಏಶ್ಯನ್ ಗೇಮ್ಸ್ ನಲ್ಲಿ ಈ ಪದಕಗಳು ಬಂದಿವೆ. ಅವರು ತಂಡ ವಿಭಾಗದಲ್ಲಿ ಚಿನ್ನ ಗೆದ್ದರೆ, ವೈಯಕ್ತಿಕ ವಿಭಾಗದಲ್ಲಿ ಕಂಚು ಜಯಿಸಿದ್ದಾರೆ.