ಸಂಸತ್ ಭದ್ರತೆ ಉಲ್ಲಂಘನೆ: ಆರೋಪಿಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರಕಾರವನ್ನು ಮಣಿಸಲು ಅರಾಜಕತೆ ಸೃಷ್ಟಿಸಲು ಬಯಸಿದ್ದರು: ಪೊಲೀಸರು
ಸಾಂದರ್ಭಿಕ ಚಿತ್ರ | Photo: ANI
ಹೊಸದಿಲ್ಲಿ: ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಲಲಿತ್ ಝಾ ಇಡೀ ಒಳಸಂಚಿನ ರೂವಾರಿಯಾಗಿದ್ದ ಮತ್ತು ಆತ ಹಾಗೂ ಸಹ ಆರೋಪಿಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರಕಾರದ ಮೇಲೆ ಒತ್ತಡ ಹೇರಲು ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಬಯಸಿದ್ದರು ಎಂದು ದಿಲ್ಲಿ ಪೋಲಿಸರು ಶುಕ್ರವಾರ ಇಲ್ಲಿಯ ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ನಿವಾಸಿ ಲಲಿತ್ ಗುರುವಾರ ರಾತ್ರಿ ದಿಲ್ಲಿ ಪೋಲಿಸರಿಗೆ ಶರಣಾಗಿದ್ದು, ಆತನಿಗೆ ಏಳು ದಿನಗಳ ಪೋಲಿಸ್ ಕಸ್ಟಡಿಯನ್ನು ವಿಧಿಸಲಾಗಿದೆ.
ಸಂಸತ್ ಭದ್ರತೆಯ ಉಲ್ಲಂಘನೆಗಾಗಿ ಸಂಚನ್ನು ರೂಪಿಸಲು ಆರೋಪಿಗಳು ಹಲವಾರು ಸಲ ಭೇಟಿಯಾಗಿದ್ದರು ಎನ್ನುವುದನ್ನು ಲಲಿತ್ ಒಪ್ಪಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದರು.
ಆರೋಪಿಗಳು ಯಾವುದೇ ಶತ್ರುದೇಶ ಅಥವಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಲಲಿತ್ ನನ್ನು ಹೆಚ್ಚಿನ ವಿಚಾರಣೆಗೊಳಪಡಿಸುವ ಅಗತ್ಯವಿದೆ ಎಂದೂ ಪೋಲಿಸರು ಹೇಳಿದರು.
ಒಳಸಂಚಿನ ಮೂಲವನ್ನು ಪತ್ತೆ ಹಚ್ಚಲು ಹಾಗೂ ಇನ್ನಷ್ಟು ಜನರು ಭಾಗಿಯಾಗಿದ್ದಾರೆಯೇ ಎನ್ನುವುದನ್ನು ತಿಳಿದುಕೊಳ್ಳಲು ತಮಗೆ ನೆರವಾಗಬಲ್ಲ ಆರೋಪಿಗಳ ಮೊಬೈಲ್ ಫೋನ್ ಗಳು ಪೋಲಿಸರ ಬಳಿಯಲ್ಲಿ ಇಲ್ಲದಿರುವುದು ಪ್ರಕರಣದಲ್ಲಿನ ಅತ್ಯಂತ ದೊಡ್ಡ ಸವಾಲಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಯೋರ್ವರು ತಿಳಿಸಿದರು.
ತನ್ನ ಫೋನನ್ನು ದಿಲ್ಲಿ-ಜೈಪುರ ಗಡಿಯ ಬಳಿ ಎಸೆದಿದ್ದಾಗಿ ಮತ್ತು ಇತರ ಆರೋಪಿಗಳ ಫೋನ್ ಗಳನ್ನು ನಾಶಗೊಳಿಸಿದ್ದಾಗಿ ಲಲಿತ್ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದರು.
ಆರೋಪಿಗಳು ಸಂಚು ರೂಪಿಸಿದ್ದು,ಅದನ್ನು ಕಾರ್ಯಗತಗೊಳಿಸುವ ಮುನ್ನ ಹಲವಾರು ಬಾರಿ ದಿಲ್ಲಿಗೆ ಭೇಟಿ ನೀಡಿದ್ದನ್ನು ಗಮನಿಸಿದರೆ ಅವರು ವಿದೇಶಿ ಹಣಕಾಸು ಪಡೆದಿರಬಹುದು ಎಂದು ಪೋಲಿಸರು ಶಂಕಿಸಿದ್ದಾರೆ.
ಹೊಗೆ ಡಬ್ಬಿಗಳನ್ನು ಬಚ್ಚಿಟ್ಟುಕೊಳ್ಳಲು ಆರೋಪಿಗಳ ಶೂಗಳನ್ನು ವಿನ್ಯಾಸಗೊಳಿಸಿದ್ದ ವ್ಯಕ್ತಿಗಾಗಿ ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.
ಸಂಸತ್ ಭದ್ರತೆ ಉಲ್ಲಂಘನೆ ಕೃತ್ಯವನ್ನು ನಡೆಸಿದ್ದೇಕೆ ಎಂಬ ಪೋಲಿಸರ ಪ್ರಶ್ನೆಗೆ ಲಲಿತ್, ನಾವೆಲ್ಲ ನಿರುದ್ಯೋಗದಿಂದಾಗಿ ಅಸಮಾಧಾನಗೊಂಡಿದ್ದೆವು ಎಂದು ಉತ್ತರಿಸಿದ್ದಾನೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಕೃತ್ಯಕ್ಕೆ ಮುನ್ನ ಆರೋಪಿಗಳ ಜೊತೆ ಇತರ ವ್ಯಕ್ತಿಗಳೂ ಇದ್ದರೇ ಎನ್ನುವುದನ್ನು ತಿಳಿಯಲು ಪೋಲಿಸರು ಸಂಸತ್ ಮತ್ತು ಸಮೀಪದ ಸ್ಥಳಗಳ ಸಿಸಿಟಿವಿಗಳಿಂದ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ.
ಸಂಸತ್ತಿನಲ್ಲಿ ಘಟನೆ ನಡೆದಿದ್ದ ಸಮಯದಲ್ಲಿ ಸಕ್ರಿಯವಾಗಿದ್ದ ಮೊಬೈಲ್ ಫೋನ್ ಗಳ ಡಂಪ್ ಡೇಟಾವನ್ನೂ ಪೋಲಿಸರು ಸಂಗ್ರಹಿಸುತ್ತಿದ್ದಾರೆ.
ತಮ್ಮ ಮುಖ್ಯ ಸಂಚು ವಿಫಲಗೊಂಡರೆ ಇನ್ನೊಂದು ಸಂಚನ್ನೂ ಆರೋಪಿಗಳು ಹೊಂದಿದ್ದರು ಎಂದು ಪೋಲಿಸರು ಶಂಕಿಸಿದ್ದಾರೆ.
ಪೋಲಿಸರು ನಾಲ್ವರು ಆರೋಪಿಗಳ ವಿರುದ್ಧ ಯುಎಪಿಎ ಅಡಿ ಆರೋಪಗಳನ್ನು ಹೊರಿಸಿದ್ದಾರೆ.
ಈ ನಡುವೆ ಲಕ್ನೋ ಪೋಲಿಸರು ಆರೋಪಿ ಸಾಗರ ಶರ್ಮಾಗೆ ಸೇರಿದ ಡೈರಿಯೊಂದನ್ನು ದಿಲ್ಲಿ ಪೋಲಿಸರಿಗೆ ತಲುಪಿಸಿದ್ದು,ಇದು ಪೋಲಿಸರ ತನಿಖೆಗೆ ನೆರವಾಗಬಹುದು. ಶರ್ಮಾ ಕುಟುಂಬವು ಈ ಡೈರಿಯನ್ನು ಲಕ್ನೋ ಪೋಲಿಸರಿಗೆ ಒಪ್ಪಿಸಿತ್ತು.
ಇಡೀ ಕುಟುಂಬಕ್ಕೆ ಈಗಲೂ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ಲಲಿತ್ ನ ಹಿರಿಯ ಸೋದರ ಶಂಭು ಝಾ,‘ಆತ ಇದರಲ್ಲಿ ಹೇಗೆ ತೊಡಗಿಸಿಕೊಂಡ ಎನ್ನುವುದು ನಮಗೆ ತಿಳಿದಿಲ್ಲ. ಬಾಲ್ಯದಿಂದಲೂ ಶಾಂತ ಸ್ವಭಾವದ ಮಗುವಾಗಿದ್ದ ಆತ ತುಂಬ ಅಂತರ್ಮುಖಿಯಾಗಿದ್ದ. ಖಾಸಗಿಯಾಗಿ ಟ್ಯೂಷನ್ ನೀಡುವ ಜೊತೆ ಎನ್ಜಿಒಗಳೊಂದಿಗೂ ಒಡನಾಟ ಹೊಂದಿದ್ದ. ಟಿವಿ ವಾಹಿನಿಗಳಲ್ಲಿ ಆತನ ಚಿತ್ರಗಳನ್ನು ನೋಡಿ ನಮಗೆ ಆಘಾತವಾಗಿದೆ ’ ಎಂದರು.