ಸಂಸತ್ ಭದ್ರತಾ ಲೋಪ: ವಿರೋಧಪಕ್ಷಗಳೊಂದಿಗೆ ಕೈಜೋಡಿಸಿರುವುದಾಗಿ ಒಪ್ಪಿಕೊಳ್ಳುವಂತೆ ಆರೋಪಿಗಳಿಗೆ ಪೊಲೀಸರ ಚಿತ್ರಹಿಂಸೆ ; ಆರೋಪ
Photo: PTI
ಹೊಸದಿಲ್ಲಿ: ‘ನೂತನ ಸಂಸತ್ ನ ವೀಕ್ಷಕರ ಗ್ಯಾಲರಿಯಿಂದ ಸದನಕ್ಕೆ ಧುಮುಕಿ ಸ್ಮೋಕ್ ಕ್ಯಾನ್ ಸಿಂಪಡಿಸಿದ ಕೃತ್ಯದಲ್ಲಿ ವಿರೋಧಪಕ್ಷಗಳೊಂದಿಗೆ ಕೈಜೋಡಿಸಿರುವುದಾಗಿ ಒಪ್ಪಿಕೊಳ್ಳುವಂತೆ ದೆಹಲಿ ಪೊಲೀಸರು ಒತ್ತಡ ಹೇರಿ ಚಿತ್ರಹಿಂಸೆ ನೀಡಿದ್ದಾರೆ’ ಎಂದು ಲೋಕಸಭೆಗೆ ನುಗ್ಗಿ ದಾಂಧಲೆ ನಡೆಸಿದ ಆರೋಪದಡಿ ಬಂಧಿತ ಆರು ಜನರಲ್ಲಿ ಐವರು ನ್ಯಾಯಾಲಯದಲ್ಲಿ ಆರೋಪಿಸಿದ್ದಾರೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹರ್ದೀಪ್ ಕೌರ್ ಎದುರು ಆರೋಪಿಗಳು ಈ ಹೇಳಿಕೆ ನೀಡಿದ್ದಾರೆ ಎಂದು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಸುಮಾರು 70 ಪುಟಗಳ ಖಾಲಿ ಹಾಳೆಗಳ ಮೇಲೆ ಸಹಿ ಹಾಕುವಂತೆ ಒತ್ತಡ ಹೇರಿದ್ದಾರೆ’ ಎಂದು ಆರೋಪಿಗಳಾದ ಡಿ.ಮನೋರಂಜನ್, ಸಾಗರ್ ಶರ್ಮಾ, ಲಲಿತ್ ಜಾ, ಅಮೋಲ್ ಶಿಂದೆ ಹಾಗೂ ಮಹೇಶ್ ಕುಮಾವತ್ ನ್ಯಾಯಾಲಯಕ್ಕೆ ಹೇಳಿದ್ದಾರೆ.
‘ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ವೇಳೆ ವಿದ್ಯುತ್ ಶಾಕ್ ನೀಡಿ ಚಿತ್ರಹಿಂಸೆ ನೀಡಲಾಯಿತು. ರಾಷ್ಟ್ರೀಯ ಪಕ್ಷಗಳು ಹಾಗೂ ಅವುಗಳ ಮುಖಂಡರೊಂದಿಗಿನ ಒಡನಾಟ ಇರುವುದಾಗಿ ಬರೆದುಕೊಡುವಂತೆ ಇಬ್ಬರು ಆರೋಪಿಗಳ ಮೇಲೆ ಒತ್ತಡ ಹೇರಲಾಗಿದೆ’ ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಆರೋಪಗಳ ಕುರಿತು ಪ್ರತಿಕ್ರಿಯಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತು. ಪ್ರಕರಣವನ್ನು ಫೆ. 17ರಂದು ವಿಚಾರಣೆ ನಡೆಸುವುದಾಗಿ ಹೇಳಿತು.
ಖಾಲಿ ಹಾಳೆಗಳ ಮೇಲೆ ಸಹಿ ಹಾಕುವಂತೆ ಪೊಲೀಸರು ಒತ್ತಡ ಹೇರಿದ್ದಾರೆ ಎಂದು ಆರನೇ ಆರೋಪಿ ನೀಲಂ ಆಜಾದ್ ಈಗಾಗಲೇ ಅವರು ಹಲವು ಬಾರಿ ಆರೋಪಿ ಮಾಡಿದ್ದಾರೆ. ಅವರ ಅರ್ಜಿಯು ನ್ಯಾಯಾಲಯದಲ್ಲಿದೆ.
‘ವಿಚಾರಣೆ ಸಂದರ್ಭದಲ್ಲಿ ನಡೆಸಲಾದ ಮಂಪರು ಪರೀಕ್ಷೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ನಾಯಕರ ಒಡನಾಟ ಕುರಿತು ಪರೀಕ್ಷೆ ನಡೆಸಿದ ವ್ಯಕ್ತಿಗಳು ಪ್ರಶ್ನೆಗಳನ್ನು ಕೇಳಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.