ಶಿವಸೇನೆಯ ಮುಖವಾಣಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಲೇಖನ ಪ್ರಕಟ: ಸಂಜಯ್ ರಾವತ್ ವಿರುದ್ಧ ಪ್ರಕರಣ ದಾಖಲು
ಸಂಜಯ್ ರಾವತ್ | Photo : PTI
ಮುಂಬೈ: ಶಿವಸೇನೆ ಪಕ್ಷದ ಮುಖವಾಣಿ 'ಸಾಮ್ನಾ'ದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಲೇಖನ ಬರೆದಿದ್ದಕ್ಕಾಗಿ ಯವತ್ಮಾಲ್ ಪೊಲೀಸರು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಂಜಯ್ ರಾವತ್ ವಿರುದ್ಧ ಬಿಜೆಪಿ ಯವತ್ಮಾಲ್ ಸಂಚಾಲಕ ನಿತಿನ್ ಭೂತಾಡ ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದೆ. ರಾವತ್ ಅವರು 'ಸಾಮ್ನಾ' ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಸಂಜಯ್ ರಾವತ್ ಅವರು ಡಿಸೆಂಬರ್ 11 ರಂದು ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಲೇಖನ ಬರೆದಿದ್ದಾರೆ ಎಂದು ಬಿಜೆಪಿ ನಾಯಕ ತಮ್ಮ ದೂರಿನಲ್ಲಿ ಹೇಳಿದ್ದಾರೆ.
ರಾವತ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 153 (ಎ) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) (2) ಮತ್ತು 124 (ಎ) (ದ್ವೇಷ ಅಥವಾ ತಿರಸ್ಕಾರವನ್ನು ತರುವ ಪ್ರಯತ್ನಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. .
ತಮ್ಮ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಖಂಡಿಸಿರುವ ಸಂಜಯ್ ರಾವತ್, “ನಾನು ಪ್ರಧಾನಿ ವಿರುದ್ಧ ಮಾತನಾಡಿದ ಕಾರಣ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೇಶದಲ್ಲಿ ಇನ್ನೂ ಪ್ರಜಾಪ್ರಭುತ್ವವಿದೆ” ಎಂದು ಕಿಡಿ ಕಾರಿದ್ದಾರೆ.