15 ದಿನದಲ್ಲಿ 24 ಕೋಟಿ ರೂ. ಮನೆತೆರಿಗೆ ಪಾವತಿಸಿ: ಎಎಂಯುಗೆ ನಗರ ಪಾಲಿಕೆ ನೋಟಿಸ್
x.com/airnewsalerts
ಆಗ್ರಾ: ಅಲೀಗಢ ಮಹಾನಗರ ಪಾಲಿಕೆಗೆ ಬಾಕಿ ಇರುವ 24.4 ಕೋಟಿ ರೂಪಾಯಿ ಮನೆತೆರಿಗೆ ಬಾಕಿಯನ್ನು 15 ದಿನಗಳ ಒಳಗಾಗಿ ಪಾವತಿಸುವಂತೆ ಅಲೀಗಢ ಮುಸ್ಲಿಂ ವಿಶ್ವವಿದ್ಯಾನಿಲಯ (ಎಎಂಯು)ಕ್ಕೆ ಪಾಲಿಕೆ ನೋಟಿಸ್ ನೀಡಿದೆ. ಪಾವತಿಸಲು ವಿಳಂಬವಾದಲ್ಲಿ ಮಹಾನಗರ ಪಾಲಿಕೆ ಕಾಯ್ದೆಯ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.
ವಿಶ್ವವಿದ್ಯಾನಿಲಯದ 40 ಆಸ್ತಿಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿಸಿಕೊಂಡಿದೆ ಎಂದು ಅಲಿಘರ್ ಮುನ್ಸಿಪಲ್ ಕಾರ್ಪೊರೇಶನ್ (ಎಎಂಸಿ) ಹೇಳಿದೆ. ಈ ಮೊದಲು 22 ಜಾಗಗಳಿಗೆ ಸಂಬಂಧಿಸಿದ ತೆರಿಗೆಯನ್ನು ಪಾವತಿಸಲಾಗಿದೆ. ಉಳಿಕೆ 18 ಆಸ್ತಿಗಳಿಗೆ ಸಂಬಂಧಿಸಿದ 24.4 ಕೋಟಿ ರೂಪಾಯಿ ಬಾಕಿ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
"2017ರಿಂದಲೂ ತೆರಿಗೆ ಬಾಕಿ ಇದೆ. ಈಗಾಗಲೇ ಬಿಲ್ ಹಾಗೂ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಲಾಗಿದೆ. ಪಾಲಿಕೆ ಆಯುಕ್ತರು ಎಎಂಯು ರಿಜಿಸ್ಟ್ರಾರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದು, ಯುಜಿಸಿಯಿಂದ ಅನುದಾನಕ್ಕಾಗಿ ಎಎಂಯು ಮನವಿ ಮಾಡಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ. ಅನುದಾನ ಪಡೆದ ಬಳಿಕ ಬಾಕಿ ಪಾವತಿಸುವುದಾಗಿ ಎಎಂಯು ತಿಳಿಸಿದೆ" ಎಂದು ಎಎಂಸಿ ಕಂದಾಯ ಮೌಲ್ಯಮಾಪನ ಅಧಿಕಾರಿ ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.
"15 ದಿನಗಳ ಒಳಗಾಗಿ ಬಾಕಿಯನ್ನು ಪಾವತಿಸದಿದ್ದರೆ, ವಿಶ್ವವಿದ್ಯಾನಿಲಯಕ್ಕೆ ಮತ್ತೊಂದು ನೆನಪೋಲೆ ನೀಡಲಾಗುತ್ತದೆ. ಆ ಬಳಿಕ ಅವರ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಕಟ್ಟಡಗಳಿಗೆ ಬೀಗಮುದ್ರೆ ಹಾಕುವ ಬದಲಾಗಿ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ.